ಬಂಟ್ವಾಳ: ಭಾರತೀಯ ಜೀವ ವಿಮಾ ನಿಗಮ ಶಾಖೆಯ ಪ್ರತಿನಿಧಿಗಳ ತಂಡವು ಶುಕ್ರವಾರ ತಿರುಪತಿ ವೆಂಕಟೇಶ್ವರ ದೇವರ ದರ್ಶನ ಪಡೆದರು.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಇಲ್ಲಿನ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ತಂಡದಲ್ಲಿ ಮಹಿಳಾ ಪ್ರತಿನಿಧಿಯೊಬ್ಬರಿಗೆ ಟಿಕೆಟ್ ಅದಲು ಬದಲಾದ ವೇಳೆ ಅವರನ್ನು ಬೆಂಗಳೂರಿನ ಅಪರಿಚಿತ ಮಹಿಳೆಯೊಬ್ಬರು ಕರೆದು ದೇವರ ದರ್ಶನ ಮಾಡಿಸಿದ ಘಟನೆ ಶುಕ್ರವಾರ ನಡೆದಿದೆ.
ಬಂಟ್ವಾಳ ಎಲ್ಲೈಸಿ ಖಾಖೆ ವತಿಯಿಂದ ಒಟ್ಟು ೪೬ ಮಂದಿ ವಿಮಾ ಪ್ರತಿನಿಧಿಗಳು ಕಳೆದ ೧೫ ದಿನಗಳ ಹಿಂದೆಯೇ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬಸ್ ಮತ್ತು ಟಿಕೇಟು ಕಾದಿರಿಸಿ ಗುರುವಾರ ತಿರುಪತಿಗೆ ತೆರಳಿದ್ದರು.
ಆದರೆ ಶುಕ್ರವಾರ ಬೆಳಿಗ್ಗೆ ತಿರುಮಲ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳಾ ಪ್ರತಿನಿಧಿಯೊಬ್ಬರ ಟಿಕೆಟ್ ಅದಲು ಬದಲಾಗಿರುವುದು ತಪಾಸಣೆ ವೇಳೆ ಕಂಡು ಬಂದಿದೆ. ಇವರನ್ನು ಅಲ್ಲಿನ ಭದ್ರತಾ ಸಿಬ್ಬಂದಿಗಳು ತಡೆದು ನಿಲ್ಲಿಸಿ ಹೊರಗೆ ಕಳುಹಿಸಿದ್ದಾರೆ. ಇದೇ ವೇಳೆ ಎಲ್ಲೈಸಿ ಅಭಿವೃದ್ಧಿ ಮಧ್ವರಾಜ್ ಕಲ್ಮಾಡಿ ಮತ್ತಿತರರು ಭದ್ರತಾ ಸಿಬ್ಬಂದಿಗಳಿಗೆ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಉಳಿದಂತೆ ಎಲ್ಲರೂ ಅಂದು ಮಧ್ಯಾಹ್ನ ದೇವರ ದರ್ಶನ ಪಡೆದು ಆಂಜನೇಯ ಗುಡಿ ಬಳಿ ಬರುತ್ತಿದ್ದಂತೆಯೇ ಅವರಿಗೆ ಅಚ್ಚರಿ ಕಾದಿತ್ತು. ದೇವಳದ ಹೊರಗೆ ಕಣ್ಣೀರಿಡುತ್ತಿದ್ದ ಮಹಿಳಾ ಪ್ರತಿನಿಧಿಯನ್ನು ಬೆಂಗಳೂರಿನ ಅಪರಿಚಿತ ಮಹಿಳೆಯೊಬ್ಬರು ಕರೆದುಕೊಂಡು ಎಲ್ಲರಿಗಿಂತ ಮೊದಲು ದೇವರ ದರ್ಶನ ಮಾಡಿಸಿ ಬಳಿಕ ಕಣ್ಮರೆಯಾಗಿದ್ದರು.
ದಸರಾ ರಜೆ ಜೊತೆಗೆ ಭಾದ್ರಪದ ಮಾಸದ ಮೂರನೇ ವಾರದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಭಾರೀ ಹೆಚ್ಚಳವಾಗಿತ್ತು. ಆದರೆ ದೇವರ ದರ್ಶನ ಸಿಗದೆ ಕಣ್ಣೀರಿಟ್ಟ ಮಹಿಳಾ ಪ್ರತಿನಿಧಿಗೆ ಸ್ವತಃ ತಿರುಪತಿ ತಿಮ್ಮಪ್ಪನೇ ಮಹಿಳಾ ರೂಪದಲ್ಲಿ ಬಂದು ದೇವರ ದರ್ಶನ ಮಾಡಿಸಿದ್ದಾರೆ ಎಂದು ಭಾನುವಾರ ಬಂಟ್ವಾಳಕ್ಕೆ ಹಿಂತಿರುಗಿದ ಭಕ್ತರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
