ಬಂಟ್ವಾಳ: ೨ರಿಂದ ೬ರ ತನಕ ಸಂಭ್ರಮ ಸಡಗರ, ೯೦ನೇ ವರ್ಷದ ಶಾರದಾಪೂಜೆ, ಸ್ಮರಣಸಂಚಿಕೆ ಬಿಡುಗಡೆ
ಬಂಟ್ವಾಳ: ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ೧೯೩೩ರಲ್ಲಿ ಆರಂಭಗೊAಡ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ ೯೦ನೇ ವರ್ಷದ ಶಾರದಾ ಪೂಜೆ ಅ. ೨ರಿಂದ ೬ರತನಕ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ದೇವಳದ ಮೊಕ್ತೇಸರ ಪಿ.ಪ್ರವೀಣ ಕಿಣಿ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ.೨ರಂದು ಬೆಳಿಗ್ಗೆ ೮ ಗಂಟೆಗೆ ಶಾರದಾ ಪ್ರತಿಷ್ಠೆ, ೯ ಗಂಟೆಗೆ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಶಾರದೆಗೆ ರಜತ ಕಿರಣ, ರಜತ ವೀಣೆ, ರಜತ ಪ್ರಭಾವಳಿ ಸಮರ್ಪಿಸುವರು ಎಂದರು.
ಅಂದು ಸಂಜೆ ೬ ಗಂಟೆಗೆ ದುರ್ಗಾ ನಮಸ್ಕಾರ, ೩ರಂದು ಬೆಳಿಗ್ಗೆ ೮ ಗಂಟೆಗೆ ಸರಸ್ವತಿ ಹವನ, ಕಲಶ ಪ್ರತಿಷ್ಠೆ, ಸಂಜೆ ೬ ಗಂಟೆಗೆ ಚಂಡಿಕಾ ಹವನ, ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಇದೆ. ೪ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ೬ ಗಂಟೆಗೆ ಜಲ್ಲೆ ಹೂವಿನ ಅಲಂಕಾರ, ೫ ರಂದು ಬೆಳಿಗ್ಗೆ ೧೧ ಗಂಟೆಗೆ ಅಕ್ಷರಾಭ್ಯಾಸ, ಸಂಜೆ ೪ ಗಂಟೆಗೆ ಪ್ರತಿಭಾ ಪ್ರದರ್ಶನ, ೫.೩೦ ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ಇಲ್ಲಿನ ಮರದ ಶಾರದಾ ವಿಗ್ರಹಕ್ಕೆ ಪ್ರತಿದಿನ ವಿಶೇಷ ಅಲಂಕಾರ ನಡೆಯಲಿದ್ದು, ವಿಗ್ರಹ ಜಲಸ್ತಂಭನ ಇರುವುದಿಲ್ಲ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಬಿ.ಪುರುಷೋತ್ತಮ ಶೆಣೈ, ಕಾರ್ಯದರ್ಶಿ ಶಿವಾನಂದ ಬಾಳಿಗಾ, ಬಿ.ವಸಂತ ಪ್ರಭು, ಕೆ.ನರಸಿಂಹ ಕಾಮತ್ ಇದ್ದರು.