ಬಜ್ಪೆ ಪೇಟೆಯಲ್ಲಿ ಕೆಆರ್‌ಐಡಿಎಲ್‌ನಿಂದ ಅವೈಜ್ಞಾನಿಕ ಕಾರ್ ಶೆಡ್ ನಿರ್ಮಾಣ?
ಕೈಕಂಬ : ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕರ್ನಾಟಕ ರೂರಲ್ ಇನ್ಫ್ರಾಸ್ಟಕ್ಚರ್ ಡೆವೆಲಪ್‌ಮೆಂಟ್ ಲಿಮಿಟೆಡ್-ಕೆಆರ್‌ಐಡಿಎಲ್) ಸಂಸ್ಥೆಯು ಬಜ್ಪೆ ಪೇಟೆಯಲ್ಲಿ ಬಜ್ಪೆ ಪಟ್ಟಣ ಪಂಚಾಯತ್‌ನಿಂದ ದೃಢಪತ್ರ ಪಡೆಯದೆ, ಪಿಡಬ್ಲ್ಯೂಡಿ ನಿಯಮ ಉಲ್ಲಂಘಿಸಿ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಕಾರ್ ಪಾರ್ಕಿಂಗ್ ಶೆಡ್ ವಿರುದ್ಧ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ.

ಸಣ್ಣ ಫ್ಲೆಕ್ಸ್, ಬ್ಯಾನರ್ ಕಟ್ಟಲು ಹಾಗೂ ಬಡವರು ಮನೆ ನಿರ್ಮಿಸಲು ಸರ್ಕಾರದ ವಿವಿಧ ಇಲಾಖೆಗಳ ಹಲವು ಅನುಮತಿ ಪತ್ರ ಪಡೆಯಬೇಕಾತ್ತದೆ. ಅಂತಹದ್ದರಲ್ಲಿ, ಬಜ್ಪೆ ಪೇಟೆಯಲ್ಲಿ ಸರ್ಕಾರಿ ನಿಯಮ ಗಾಳಿಗೆ ತೂರಿ ಇಷ್ಟೊಂದು ದೊಡ್ಡ ಕಾರ್ ಶೆಡ್ ನಿರ್ಮಿಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಸ್ತೆಯ ಮಧ್ಯ ಭಾಗದಿಂದ ೧೫ ಮೀಟರ್ ಮತ್ತು ಸೆಟ್ ಬ್ಯಾಕ್‌ನಿಂದ ೪ ಮೀಟರ್ ಅಂತರದಲ್ಲಿ ಯಾವುದೇ ನಿರ್ಮಾಣವಿರಕೂಡದು ಎಂಬ ನಿಯಮ ಪಿಡಬ್ಲ್ಯೂಡಿಯಲ್ಲಿದೆ. ಆದರೆ, ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರ್ ಶೆಡ್ ರಸ್ತೆಯಿಂದ ಕೇವಲ ೨ ಮೀಟರ್ ಅಂತರದಲ್ಲಿದ್ದು, ಇದಕ್ಕೆ ಪಟ್ಟಣ ಪಂಚಾಯತ್‌ನಿಂದ ದೃಢೀಕರಣ ಪತ್ರ ಅಥವಾ ಮೂಡಾದಿಂದ ಅನುಮತಿ ಪತ್ರ ಪಡೆದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಅವೈಜ್ಞಾನಿಕ ಕಾಮಗಾರಿ ವಿರುದ್ಧ ಬಜ್ಪೆ ಪಟ್ಟಣ ಪಂಚಾಯತ್, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲು ಸಾರ್ವಜನಿಕರು ಸಿದ್ಧತೆ ನಡೆಸಿದ್ದಾರೆ.
”ಅದು ಕೆಆರ್‌ಐಡಿಎಲ್ ಕಾಮಗಾರಿಯಾಗಿದೆ. ಕಾಮಗಾರಿ ನಡೆಸಲು ಪಟ್ಟಣ ಪಂಚಾಯತ್‌ನಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕಿದ್ದ ದೃಢೀಕರಣ ಪತ್ರ ಪಡೆದುಕೊಂಡಿಲ್ಲ. ಅವೈಜ್ಞಾನಿಕವಾಗಿದ್ದರೆ ಸಂಬಂಧಪಟ್ಟ ಇಲಾಖೇಯೇ ಕ್ರಮ ಕೈಗೊಳ್ಳಲಿದೆ” ಎಂದು ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ. ಕೆ. ತಿಳಿಸಿದರು.