ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್
ನವದೆಹಲಿ: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ತರಲಾದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಡಿಗೆ ಬಿಡುವುದಕ್ಕೂ ಮುಂಚೆ, ಮನಮೋಹನ್ ಸಿಂಗ್ ಅವರು 2008-2009ರಲ್ಲಿಯೇ ಆಪರೇಷನ್ ಚೀತಾ ಪ್ರಸ್ತಾವನೆಯನ್ನು ಮಾಡಿದ್ದರು ಎಂದು ಎಐಸಿಸಿ ಮಾಧ್ಯಮ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮಾಷೆ ಮಾಡುತ್ತಿದ್ದಾರೆ. 2009-11ರಲ್ಲಿಯೇ ಚೀತಾ ಪ್ರಾಜೆಕ್ಟ್ ಅನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿತ್ತು. 2010ರ ಏಪ್ರಿಲ್ 25ರಂದು ಕೇಪ್ ಟೌನ್ ಹೋಗಿ ಚೀತಾಗಳನ್ನು ಭಾರತಕ್ಕೆ ತರಲು ಮಾತುಕತೆ ನಡೆಸಿತ್ತು. ಕಾಂಗ್ರೆಸ್ ಪ್ರಯತ್ನದ ಭಾಗವಾಗಿ ಭಾರತಕ್ಕೆ ಚೀತಾಗಳು ಬಂದಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಇದೊಂದು ಅನಗತ್ಯ ತಮಾಷೆ ಆಗಿದೆ. ರಾಷ್ಟ್ರೀಯ ಸಮಸ್ಯೆಗಳು, ಭಾರತ್ ಜೋಡೋ ಅಭಿಯಾನ ಮರೆಮಾಚಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ತರಲಾಗಿದೆ.