ಬಂಟ್ವಾಳ: ಮೂಡುಬಿದಿರೆ- ಬಂಟ್ವಾಳ ರಾಜ್ಯ ಹೆದ್ದಾರಿ ಮಧ್ಯೆ ಸಿಗುವ ರಾಯಿಯಿಂದ ಬದನಾಡಿಗೆ ಸಂಪರ್ಕ ಕಲ್ಪಿಸುವ ಹೊಂಡಮಯ ರಸ್ತೆಯನ್ನು ಗ್ರಾಮಸ್ಥರೇ ಭಾನುವಾರ ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದಾರೆ. ಪ್ರಗತಿಪರ ಕೃಷಿಕ ರಾಜೇಶ್ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಸ್ಥಳೀಯ ಶ್ರೀ ದುರ್ಗಾಪರಮೆಶ್ವರೀ ಭಜನಾ ಮಂಡಳಿಯ ಸಹಯೋಗದೊಂದಿಗೆ 50ಕ್ಕಿಂತಲೂ ಅಧಿಕ ಮಂದಿಯಿದ್ದ ತಂಡ ದುರಸ್ತಿ ಕಾರ್ಯ ನಡೆಸಿದೆ.
1

ಸುಮಾರು 800 ವರ್ಷಗಳಿಗೂ ಮಿಕ್ಕಿ ಹಳೆಯ ಪುರಾತನ ಹಿನ್ನೆಲೆ ಹೊಂದಿರುವ ಇಲ್ಲಿನ ಕಾರಣಿಕ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ನ.26ರಿಂದ 28ರತನಕ ವಾರ್ಷಿಕ ಷಷ್ಠೀ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಪಂಚಮಿ ಉತ್ಸವ, ಮಡೆಸ್ನಾನ, ಸಾರ್ವಜನಿಕ ಅನ್ನಸಂತರ್ಪಣೆ, ದೇವರ ಬಲಿ ಉತ್ಸವ, ಪರಿವಾರ ದೈವಗಳ ನೇಮೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಸಹಸ್ರಾರು ಮಂದಿ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ರಸ್ತೆಯ ಅಲ್ಲಲ್ಲಿ ಡಾಮಾರು ಕಿತ್ತು, ಜಲ್ಲಿಕಲ್ಲುಗಳು ಚದುರಿ ಹೋಗಿ ಹೊಂಡಮಯ ರಸ್ತೆಯಲ್ಲಿ ವಾಹನ ಸಂಚಾರವೇ ಅಸಾಧ್ಯವೆನ್ನುಷ್ಟರ ಮಟ್ಟಿಗೆ ರಸ್ತೆ ಹಾನಿಗೀಡಾಗಿದೆ. ಈ ನಿಟ್ಟಿನಲ್ಲಿ ರಸ್ತೆಯನ್ನು ತಕ್ಷಣ ದುರಸ್ತಿ ಪಡಿಸುವಂತೆ ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಸಕರಾತ್ಮಕ ಸ್ಪಂದನೆ ದೊರೆಯದ ಪರಿಣಾಮ ಗ್ರಾಮಸ್ಥರೇ ಅಪಾರ ಸಂಖ್ಯೆಯಲ್ಲಿ ಸೇರಿ ಶ್ರಮದಾನ ನಡೆಸ ಬೇಕಾಯಿತು.

ಈ ಸಂದರ್ಭ ರಾಜೇಶ್ ನಾಯ್ಕ್ ಉಳೀಪಾಡಿಗುತ್ತು ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ಹಲವು ವರ್ಷಳಿಂದ ಗ್ರಾಮಸ್ಥರೇ ಸೇರಿಕೊಂಡು ರಸ್ತೆಯನ್ನು ದುರಸ್ತಿ ಪಡಿಸುತ್ತಿದ್ದರು. ಸಂಬಂಧಪಟ್ಟ ಇಲಾಖೆಗೆ ರಸ್ತೆ ದುರಸ್ತಿ ಪಡಿಸುವಂತೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರದ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದ್ದರು. ಆದರೆ ಪ್ರತಿಭಟನೆಗೆ ವ್ಯರ್ಥಪಡಿಸುವ ಮಾನವ ಶ್ರಮವನ್ನು ಶ್ರಮದಾನಕ್ಕೆ ಬಳಸಿ ವಾಹನ ಸಂಚಾರಕ್ಕೆ ಅಗತ್ಯವಿರುವಷ್ಟು ರಸ್ತೆ ದುರಸ್ತಿ ಮಾಡುವಂತೆ ಸಲಹೆ ನೀಡಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಶ್ರಮದಾನ ನಡೆಸುವ ಮೂಲಕ ಇಲಾಖೆಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದರು.
ತಾ.ಪಂ.ಸದಸ್ಯ ವಸಂತ ಅಣ್ಣಳಿಕೆ, ರಶ್ಮಿತ್ ಶೆಟ್ಟಿ ಕೈತ್ರೋಡಿ, ರಮನಾಥ ರಾಯಿ ಮತ್ತಿತರರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *