ನೇಪಾಳದಲ್ಲಿ ಭೂಕುಸಿತ – 14 ಸಾವು, 10 ಮಂದಿ ನಾಪತ್ತೆ
ಕಠ್ಮಂಡು: ಭಾರೀ ಮಳೆಯಿಂದಾಗಿ ಪಶ್ಚಿಮ ನೇಪಾಳದಲ್ಲಿ(Nepal) ಭೂಕುಸಿತ(Landslide) ಉಂಟಾಗಿದ್ದು, ಘಟನೆಯಲ್ಲಿ 14 ಜನ ಸಾವನ್ನಪ್ಪಿದ್ದಾರೆ. 7 ಮಂದಿಗೆ ಗಾಯಗಳಾಗಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ರಾಜಧಾನಿ ಕಠ್ಮಂಡುವಿನ(Kathmandu) ಪಶ್ಚಿಮಕ್ಕೆ ಸುಮಾರು 450 ಕಿ.ಮೀ ದೂರದಲ್ಲಿರುವ ಅಚ್ಚಾಮ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ಹಲವಾರು ಮನೆಗಳು ಮಣ್ಣಿನಡಿ ಹೂತುಹೋಗಿವೆ ಎನ್ನಲಾಗಿದೆ. ಅವಶೇಷಗಳಿಂದ ಮೃತದೇಹ ಹಾಗೂ ಗಾಯಾಳುಗಳನ್ನು ಹೊರ ತೆಗೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿರುವವರ ಪತ್ತೆಗೆ ರಕ್ಷಣಾ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಬೆಟ್ಟ ಪ್ರದೇಶವಾಗಿರುವ ನೇಪಾಳದಲ್ಲಿ ಆಗಾಗ ಭೂಕುಸಿತಗಳು ಉಂಟಾಗುತ್ತಲೇ ಇರುತ್ತವೆ. ಅದರಲ್ಲೂ ಜೂನ್ ಇಂದ ಸೆಪ್ಟೆಂಬರ್ ವರೆಗೆ ಭೂಕುಸಿತಗಳು ಹೆಚ್ಚಾಗಿ ಉಂಟಾಗುತ್ತವೆ. ಅಂಕಿ ಅಂಶಗಳ ಪ್ರಕಾರ ಈ ವರ್ಷ ಪ್ರವಾಹ ಹಾಗೂ ಭೂಕುಸಿತಗಳಿಂದಾಗಿ ನೇಪಾಳದಲ್ಲಿ 46 ಜನರು ಸಾವನ್ನಪ್ಪಿದ್ದು, 12 ಜನರು ನಾಪತ್ತೆಯಾಗಿದ್ದಾರೆ.