Published On: Sat, Sep 17th, 2022

ಧರ್ಮಸ್ಥಳದಲ್ಲಿ ೨೪ನೆ ವರ್ಷದ ಭಜನಾ ತರಬೇತಿ ಕಮ್ಮಟ, ಧರ್ಮವೇ ನೆಲೆನಿಂತ ಪವಿತ್ರ ಪುಣ್ಯಧಾಮ ಧರ್ಮಸ್ಥಳ

ಉಜಿರೆ: ಧರ್ಮವೇ ನೆಲೆನಿಂತ ಪವಿತ್ರ ಪುಣ್ಯಧಾಮ ಧರ್ಮಸ್ಥಳವಾಗಿದೆ ಎಂದು ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಡಾ. ಶಮಿತ ಮಲ್ನಾಡ್ ಹೇಳಿದರು. ಅವರು ಸೆ.16ರಂದು ಶುಕ್ರವಾರ ಧರ್ಮಸ್ಥಳದಲ್ಲಿ ೨೪ನೆ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಆಧ್ಯಾತ್ಮಕ್ಕೂ, ಭಜನೆಗೂ ಅವಿನಾಭಾವ ಸಂಬಂಧವಿದ್ದು, ರಾಗ-ತಾಳ ಲಯ ಬದ್ಧವಾಗಿ ಸುಶ್ರಾವ್ಯವಾಗಿ ಭಜನೆ ಹಾಡಿದಾಗ ಮನಸ್ಸಿಗೆ ಸಂತೋಷ, ಶಾಂತಿ ಮತ್ತು ಸಮಾಧಾನ ಸಿಗುತ್ತದೆ. ಎಲ್ಲರೂ ಏಕಾಗ್ರತೆಯಿಂದ ಭಜನೆಯನ್ನು ಹಾಡಿ ಸಂತೋಷದಿಂದ ಅನುಭವಿಸಿ ಎಂದುಅವರು ಸಲಹೆ ನೀಡಿದರು.

ಬಾಲ್ಯದಲ್ಲಿ ತಾನು ತಾಯಿ, ತಂದೆ ಜೊತೆ ಧರ್ಮಸ್ಥಳಕ್ಕೆ ಬಂದು ತುಲಭಾರ ಸೇವೆ ಸಲ್ಲಿಸಿ ಹೆಗ್ಗಡೆಯವರ ಆಶೀರ್ವಾದ ಪಡೆದಿರುವುದನ್ನು ಅವರು ಧನ್ಯತೆಯಿಂದ ಸ್ಮರಿಸಿದರು. ಧರ್ಮಸ್ಥಳದಲ್ಲಿ ಪ್ರಶಾಂತ ಪ್ರಾಕೃತಿಕ ಪರಿಸರ, ಸ್ವಚ್ಛತೆ, ಶಿಸ್ತು ಮತ್ತು ಭಕ್ತರಿಗೆ ನೀಡುವ ಆದರದ ಆತಿಥ್ಯವನ್ನು ಅವರು ಶ್ಲಾಘಿಸಿದರು.

ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿ ದಾನದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳಾ ಬಲೀಕರಣದೊಂದಿಗೆ ಆರ್ಥಿಕ ಪ್ರಗತಿಗೆ ನೆರವು ಮತ್ತು ಮಾರ್ಗದರ್ಶನ ನೀಡಿರುವುದನ್ನು ಅವರು ಕೃತಜ್ಞತೆಯೊಂದಿಗೆ ಸ್ಮರಿಸಿದರು.

ಎರಡು ಭಕ್ತಿಗೀತೆಗಳನ್ನು ಅವರು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳಿಗೆ ಮುದ ನೀಡಿದರು. ಡಾ. ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ಭಜನೆ ಮೂಲಕ ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂವಾದ ಸಾಧ್ಯವಾಗುತ್ತದೆ. ಉತ್ತಮ ಚಾರಿತ್ರ್ಯದೊಂದಿಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡು ಎಲ್ಲರೂ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನೆ ಮೂಲಕ ಸಾಮಾಜಿಕ ಪರಿವರ್ತನೆಯಾಗಬೇಕು. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಎಲ್ಲಾ ದೋಷಗಳನ್ನು ಹಾಗೂ ವ್ಯಸನಗಳನ್ನು ತ್ಯಜಿಸಿ ಆದರ್ಶ ನಾಯಕತ್ವದೊಂದಿಗೆ ಭಜನಾ ಮಂದಿರಗಳು ಉತ್ತಮ ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು ಎಂದು ಸಲಹೆ ನೀಡಿದ ಅವರು ಕಮ್ಮಟದಲ್ಲಿ ಆಸಕ್ತಿಯಿಂದ ಭಾಗವಹಿಸಿ ಎಲ್ಲರೂ ಭಜನಾ ಪಟುಗಳಾಗಬೇಕು ಎಂದು ಹೇಳಿದರು.

ವರದಿ ಸಾದರ ಪಡಿಸಿದ ಸುರೇಶ್ ಮೊಯಿಲಿ, ೧೩೩ ಮಹಿಳೆಯರು ಮತ್ತು ೧೮೩ ಪುರುಷರು ಸೇರಿದಂತೆಒಟ್ಟು ೩೧೬ ಮಂದಿ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮತ್ತುಅಮಿತ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಪುರುಶೋತ್ತಮ, ಪಿ.ಕೆ.ಧನ್ಯವಾದವಿತ್ತರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter