Published On: Sat, Sep 17th, 2022

ಉಜಿರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ

ಉಜಿರೆ: ಉತ್ತಮ ಚಾರಿತ್ರ್ಯವಿಲ್ಲದ ಶಿಕ್ಷಣ ಪರಿಮಳವಿಲ್ಲದ ಹೂವಿನಂತೆ ವ್ಯರ್ಥ. ಸುಪ್ತ ಪ್ರತಿಭೆಯ ವಿಕಸನದೊಂದಿಗೆ ಆದರ್ಶ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿಯಾಗಿದ್ದು ಉತ್ತಮ ಶಿಕ್ಷಣದ ಮೂಲಕ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರು ರೂಪುಗೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಸೆ.16ರಂದು ಶುಕ್ರವಾರ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ದಕ್ಷಿಣ ಕನ್ನಡಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಕೇವಲ ಸುಖಕ್ಕಾಗಿ ಅಲ್ಲ. ಉನ್ನತ ಸಾಧನೆಗಾಗಿ. ಆದುದರಿಂದ ಎಲ್ಲರೂ ಉತ್ತಮ ಸಾಧಕರಾಗಬೇಕು. ಇಂದು ಎಲ್ಲರಿಗೂ ಸಾಧನೆ ಮಾಡಲು ಸಮಾನ ಅವಕಾಶಗಳಿವೆ. ಶ್ರೀ ಸಾಮಾನ್ಯರ ಮಕ್ಕಳು ಕೂಡಾಉತ್ತಮ ಸಾಧನೆಯಿಂದಉನ್ನತ ಮಟ್ಟದ ಅಧಿಕಾರಿಗಳಾಗಿ ಸ್ಥಾನ-ಮಾನ ಪಡೆಯಬಹದು. ಸಂಸ್ಕಾರಯುತ ಶಿಕ್ಷಣ ಇಂದು ಅನಿವಾರ್ಯವಾಗಿದೆ.

ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಇಂದು ವಿಫುಲ ಅವಕಾಶಗಳಿವೆ. ಸಮೂಹ ಮಾಧ್ಯಮಗಳು, ಗೂಗಲ್, ವಿವಿಧ ವಾಹಿನಿಗಳು, ಇತ್ಯಾದಿಗಳಿಂದ ಅವರು ಸಾಕಷ್ಟು ಮಾಹಿತಿ, ಜ್ಞಾನ ಸಂಗ್ರಹ ಮಾಡುತ್ತಾರೆ. ಆದುದರಿಂದ ಇಂದಿನ ವಿದ್ಯಾರ್ಥಿಗಳನ್ನು ಎದುರಿಸಲು ಉಪನ್ಯಾಸಕರು ನಿರಂತರ ಅಧ್ಯಯನಶೀಲರಾಗಿ ಜ್ಞಾನತುಂಬಿದ ಕೊಡಗಳಾದರೆ ಮಾತ್ರ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಮಾಡಬಹುದು.

ಬದಲಾದ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೂ ತಮ್ಮಉಜ್ವಲ ಭವಿಷ್ಯವನ್ನು ರೂಪಿಸುವ ಬಗ್ಯೆ ಕನಸು, ಹಂಬಲ, ನಿರ್ದಿಷ್ಠ ಗುರಿ ಇರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಠ-ಪ್ರವಚನಗಳ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಉನ್ನತ ಸಾಧನೆ ಬಗ್ಯೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿ ಎಲ್ಲರನ್ನೂ ಅಭಿನಂದಿಸಿದರು.

ನಿವೃತ್ತ ಪ್ರಾಂಶುಪಾಲರುಗಳು ಮತ್ತುಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರುಗಳನ್ನು ಗೌರವಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿ: ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚಿಂತನ-ಮಂಥನ ಹಾಗೂ ಪರಿಶೀಲನೆಗಳು ನಡೆಯುತ್ತಿದ್ದು, ಯಾವುದೇ ವರ್ಗದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಶುಭಾಶಂಸನೆ ಮಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಹೊಸ ಶಿಕ್ಷಣ ನೀತಿ ಬಗ್ಯೆ ಹೆಚ್ಚಿನಜನರು ಒಲವು ತೋರುತ್ತಿದ್ದು ೨೦೩೦ ರೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳ್ಳುವ ಸಾಧ್ಯತೆಇದೆ ಸಚಿವರುಅಭಿಪ್ರಾಯ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿದ ಮೂಡಬಿದ್ರೆಯ ಡಾ.ಎಂ. ಮೋಹನ ಆಳ್ವ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರೀ ಮನೋಭಾವ ನಿವಾರಣೆಯಾಗಬೇಕು. ಮಾನವೀಯ ಮೌಲ್ಯಗಳೊಂದಿಗೆ ಜೀವನದ ಸವಾಲುಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ ಬೆಳೆಸುವ ಶಿಕ್ಷಣ ನೀಡಬೇಕುಎಂದುಡಾ. ಮೋಹನ ಆಳ್ವ ಸಲಹೆ ನೀಡಿದರು. ಶಿಕ್ಷಣ ಸಚಿವರು ಸರ್ಕಾದ ಪರವಾಗಿ ಹೆಗ್ಗಡೆಯವರನ್ನು ಗೌರವಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸಿ.ಡಿ. ಜಯಣ್ಣ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಡಾ.ಎಸ್. ಸತೀಶ್ಚಂದ್ರ, ಎಸ್.ಡಿ.ಎಂ.ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್‌ಚೌಟ ಉಪಸ್ಥಿತರಿದ್ದರು ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಎಸ್. ಗಂಗಾಧರ ಆಳ್ವ ಸ್ವಾಗತಿಸಿದರು ಉಜಿರೆಯ ಮಹಾವೀರಜೈನ್ ಮತ್ತು ದೀಕ್ಷಿತ್‌ರೈ ಕಾರ್ಯಕ್ರಮ ನಿರ್ವಹಿಸಿದರು.

ಕನ್ಯಾಡಿ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು ಚಿತ್ರಕನ್ಯಾಡಿ ಶಾಲೆಯಲ್ಲಿ ಸಚಿವರು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಮಾತನಾಡಿದರು.
ಉಜಿರೆ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶಾಲೆಯ ಚಟುವಟಿಕೆಗಳ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿನಿ ಶೌರ್ಯಅವರನ್ನು ಸಚಿವರು ಗೌರವಿಸಿ ಅಭಿನಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಶಾಲಾ ಮುಖ್ಯೋಪಾಧ್ಯಾಯಿನಿ ಫ್ಲೇವಿಯಾ ಡಿ’ಸೋಜಾ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ರಾಜೇಂದ್ರಅಜ್ರಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter