Published On: Fri, Sep 16th, 2022

ಬಡಗುಂಡಿ: ರಾಷ್ಟ್ರೀಯ ಹೆದ್ದಾರಿ ಬೇಲಿಗೆ ‘ತರಕಾರಿ ಕೃಷಿ ತೋರಣ’ ಸಾವಯವ ಕೃಷಿ ಬೆಳೆದ ರಾಮಣ್ಣ ನಾವೂರು

ಬಂಟ್ವಾಳ: ಮಣಿಹಳ್ಳ-ವಗ್ಗ ರಾಷ್ಟ್ರೀಯ ಹೆದ್ದಾರಿ ನಡುವಿನ ಬಡಗುಂಡಿ ಎಂಬಲ್ಲಿ ವಿಸ್ತರಣೆಗೊಂಡ ರಾಷ್ಟ್ರೀಯ ಹೆದ್ದಾರಿ ಬದಿ ಸಾಲು ಸಾಲು ಬೆಂಡೆ ಮತ್ತು ಅಲಸಂಡೆ ತರಕಾರಿ ಬೆಳೆಸುವ ಮೂಲಕ ಕೃಷಿಕರೊಬ್ಬರು ಗಮನ ಸೆಳೆದಿದ್ದಾರೆ.

ಇಲ್ಲಿನ ಬಡಗುಂಡಿ ನಿವಾಸಿ ರಾಮಣ್ಣ ಸಪಲ್ಯ ನಾವೂರು ಎಂಬವರು ಕಳೆದ 25ವರ್ಷಗಳಿಂದ ತನ್ನ ಅಡಿಕೆ ತೋಟ ಮತ್ತು ಗದ್ದೆಯಲ್ಲಿ ತರಕಾರಿ ಬೆಳೆಯುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಇವರ ಜಮೀನಿನ ಒಂದು ಭಾಗ ಹೆದ್ದಾರಿ ವಿಸ್ತರಣೆಗೆ ಹೋಗಿದೆ. ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಈ ರಸ್ತೆ ಬದಿ ಉಳಿದಿರುವ ಅಡಿಕೆ ತೋಟಕ್ಕೆ ಇವರು ರಕ್ಷಣೆ ಬೇಲಿ ಅಳವಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಬೇಲಿಯುದ್ದಕ್ಕೂ ಗೋಣಿ ಚೀಲದಲ್ಲಿ ಸಾವಯವ ಗೊಬ್ಬರ ಬಳಸಿ ಸಾಲು ಸಾಲು ಬೆಂಡೆ ಮತ್ತು ಅಲಸಂಡೆ ಗಿಡ ಬೆಳೆಯುತ್ತಿದ್ದಾರೆ.

ಈ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರು ಮತ್ತು ವಾಹನ ಸವಾರರು ಈ ಫಲವತ್ತಾದ ತರಕಾರಿ ಕಂಡು ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂದಿದೆ. ಕೇವಲ ಹಟ್ಟಿಗೊಬ್ಬರ ಮತ್ತು ಹನಿ ನೀರಾವರಿ ಮೂಲಕ 150ಕ್ಕೂ ಮಿಕ್ಕಿ ಬೆಂಡೆ ಗಿಡ, 250ಕ್ಕೂ ಮಿಕ್ಕಿ ಅಲಸಂಡೆ ಗಿಡ ಬೆಳೆದಿದ್ದು, ರಸ್ತೆ ಬದಿ ಬೇಲಿಗೆ ಅಲಸಂಡೆ ಬಳ್ಳಿ ಹಬ್ಬಿದೆ.

ಉಳಿದಂತೆ ಮನೆ ಹಿಂಬದಿ ಬೇಲಿಯಲ್ಲಿ ಅಲಸಂಡೆ ಮಾತ್ರವಲ್ಲದೆ ಹೀರೆಕಾಯಿ, ತೊಂಡೆ, ಸೋರೆ ಕಾಯಿ ಮತ್ತು ಬೂದುಕುಂಬಳ ಬಳ್ಳಿ ಬೆಳೆಯಲಾಗಿದೆ. ಈ ಹಿಂದೆ ತೈವಾನ್ ಪಪ್ಪಾಯಿ ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಕಮಡುಕೊಂಡಿದ್ದೇನೆ. ಕೆಲವೊಮ್ಮೆ ತರಕಾರಿ ಬಳ್ಳಿಗೆ ನವಿಲು ಕಾಟ ಕಂಡು ಬರುತ್ತಿದ್ದು, ಸಾವಯವ ಗೊಬ್ಬರ ಬಳಕೆಯಿಂದ ಗಿಡಗಳಿಗೆ ಯಾವುದೇ ರೋಗ ಭೀತಿ ಇಲ್ಲ. ಇದರಲ್ಲಿ ಬೆಳೆದ ತರಕಾರಿಗಳನ್ನು ಸ್ಥಳೀಯ ಅಂಗನವಾಡಿ ಸಹಿತ ಕೆಲವೊಂದು ಶಾಲೆಯ ಅಕ್ಷರ ದಾಸೋಹಕ್ಕೆ ಕೊಡುಗೆ ನೀಡುತ್ತಿರುವುದಾಗಿ ರಾಮಣ್ಣ ನಾವೂರು ತಿಳಿಸಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಂಟ್ವಾಳ ತೋಟಗಾರಿಕೆ ಇಲಾಖೆಯಿಂದ ನನಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ದೊರೆತಿದ್ದು, ಇದೀಗ ಆಸಕ್ತ ಕೃಷಿಕರಿಗೆ ಸ್ವತಃ ನಾನೇ ತರಬೇತಿ ನೀಡುತ್ತಿದ್ದೇನೆ. ತರಕಾರಿ ಬೆಳೆಯಲು ಸಾಕಷ್ಟು ಜಮೀನಿನ ಅಗತ್ಯವಿಲ್ಲ. ಮನೆ ಅಂಗಳ ಸಹಿತ ಬೇಲಿ ಅಥವಾ ಇಂತಹ ರಸ್ತೆ ಬದಿ ಕೂಡಾ ಗೋಣಿ ಚೀಲದಲ್ಲಿ ತರಕಾರಿ ಬೆಳೆಯಬಹುದು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter