Published On: Tue, Sep 13th, 2022

ಮಂಡ್ಯದ ಇಬ್ಬರು ಹಾಲಿ, ಓರ್ವ ಮಾಜಿ ಶಾಸಕರಿಗೆ ಸಂಕಷ್ಟ

ಮಂಡ್ಯ: ಮುಡಾದಲ್ಲಿ (MUDA) ನಡೆದಿದ್ದ ಐದು ಕೋಟಿ ಹಗರಣಕ್ಕೆ ಸಂಬಂಧ ಇದೀಗ ಐದು ಮಂದಿಗೆ ಜೈಲಾಗಿರುವ ಬೆನ್ನಲೇ ಮತ್ತೊಂದು ಮುಡಾದ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಹಾಲಿ ಶಾಸಕರು, ಓರ್ವ ಮಾಜಿ ಶಾಸಕ ಸೇರಿದಂತೆ 24 ಮಂದಿಯ ಎದೆಯಲ್ಲಿ ಢವಢವ ಶುರವಾಗಿದೆ. ಕೋರ್ಟ್‌ನಲ್ಲಿ ವ್ಯತಿರಿಕ್ತವಾಗಿ ತೀರ್ಪು ಬಂದರೆ ಮೂವರು ಪ್ರಮುಖ ರಾಜಕಾರಿಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೇ ಕಳೆದುಕೊಳ್ಳುವ ಜೊತೆಗೆ ರಾಜಕೀಯ ಜೀವನಕ್ಕೆ ಕಂಟಕ ಎದುರಾಗಲಿದೆ. 

ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದಿಂದ 2009 ರಲ್ಲಿ ನಿವೇಶನ ಹಂಚಿಕೆಯಾಗಿತ್ತು. ಅಂದಿನ ಮುಡಾ ಅಧ್ಯಕ್ಷರಾದ ವಿದ್ಯಾನಾಗೇಂದ್ರ ಸೇರಿದಂತೆ ಮಂಡ್ಯ ಶಾಸಕ ಎಂ.ಶ್ರೀನಿವಾಸ್ (M.Srinivas), ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು (C.S.Puttaraju, ಮಾಜಿ ಶಾಸಕ ರಮೇಶ್ ಬಂಡೀಸಿದ್ದೇಗೌಡ (Ramesh Bandisiddegowda) ಸೇರಿದಂತೆ ಮುಡಾ ಆಡಳಿತ ಮಂಡಳಿ ಸದಸ್ಯರು 107 ಮೂಡಾ ನಿವೇಶನಗಳನ್ನ ತಮ್ಮ ಕುಟುಂಬದವರಿಗೆ ಹಾಗೂ ಅತ್ಯಾಪ್ತರಿಗೆ ನಿಯಮ ಮೀರಿ ಹಂಚಿಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಆ ಹಿನ್ನಲೆ 2010 ರಲ್ಲಿ ಮಂಡ್ಯದ ವಕೀಲ ಸತ್ಯಾನಂದ ಎಂಬುವವರು ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಬಳಿಕ 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೂಡಾ ಹಗರಣವನ್ನ ಸಿಬಿಐಗೆ ವಹಿಸಿತ್ತು. ಬಳಿಕ ಸುದೀರ್ಘ ತನಿಖೆ ನಡೆಸಿದ ಸಿಬಿಐ 24 ಆರೋಪಿಗಳ ಮೇಲೆ 7,000 ಸಾವಿರ ಪುಟಗಳಷ್ಟು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಆದರೆ ತಮ್ಮ ಮೇಲಿನ ಪ್ರಕರಣವನ್ನ ವಜಾಗೊಳಿಸುವಂತೆ ಶಾಸಕ ಸಿ.ಎಸ್.ಪುಟ್ಟರಾಜು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ 2022 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನ ಕೋರ್ಟ್ ವಜಾಗೊಳಿಸಿದ್ದು, ಮಧ್ಯಪ್ರವೇಶಕ್ಕೆ ನಿರಾಕರಣೆ ಮಾಡಿತ್ತು. ಆದ್ದರಿಂದ ಸಿಬಿಐ ನ್ಯಾಯಾಲಯವೇ ಇದನ್ನು ವಿಚಾರಣೆ ಕೈಗೆತ್ತಿಕೊಂಡಿದೆ.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಐದು ಕೋಟಿ ಹಣ ದುರ್ಬಳಕೆಯಾಗಿದೆ ಎಂದು 2012ರಲ್ಲಿ ಅಂದಿನ ಕಮಿಷನರ್ ಶಿವರಾಂ ಐವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ತನಿಖೆ ಮುಗಿದು ಸೆ.9 ರಂದು ಸಿಬಿಐ ಕೋರ್ಟ್ ತೀರ್ಪು ನೀಡಿದ್ದು, ಐವರಿಗೆ ತಲಾ ಒಂದು ಕೋಟಿ ದಂಡ ಮತ್ತು 7 ವರ್ಷ ಜೈಲುವಾಸದ ತೀರ್ಪು ನೀಡಿತ್ತು. ಇದೀಗ ಈ ತೀರ್ಪಿನ ನಂತರ ಮುಡಾದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಪುಟ್ಟರಾಜು, ಎಂ.ಶ್ರೀನಿವಾಸ್ ಹಾಗೂ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರಿಗೆ ಭಯ ಶುರುವಾಗಿದೆ. ಒಂದು ವೇಳೆ ಸಿಬಿಐ ತನಿಖೆಯ ಆಧಾರದ ಮೇಲೆ ಜನಪ್ರತಿನಿಧಿಗಳ ನ್ಯಾಯಾಲಯ ವ್ಯತಿರಿಕ್ತವಾದ ತೀರ್ಪು ನೀಡಿದರೆ, ಈ ಮೂವರ ರಾಜಕೀಯ ಭವಿಷ್ಯಕ್ಕೆ ಫುಲ್‌ಸ್ಟಾಪ್ ಬಿದ್ದಂತೆ ಆಗುತ್ತದೆ. ಅಲ್ಲದೇ ಮಂಡ್ಯ ಜಿಲ್ಲೆಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter