ಬಂಟ್ವಾಳ:ಕೃಷಿ ಪ್ರಧಾನವಾಗಿ ಗುರುತಿಸಿಕೊಂಡಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉತ್ತಮ ನಾಯಕತ್ವದಲ್ಲಿ ಮುನ್ನಡೆದು ಸುಂದರ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ಸಲ್ಲಿಸಿದೆ. ಆ ಮೂಲಕ ಸಹಕಾರಿ ತತ್ವದಿಂದ ಆರ್ಥಿಕತೆಯಲ್ಲಿ ಸ್ವಾಭಿಮಾನ ಮೂಡಿಸುವ ಮೂಲಕ ರಾಜ್ಯ ಮತ್ತು ದೇಶದಲ್ಲಿ ಕೃಷಿಕರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ವಗ್ಗ ಸಮೀಪದ ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ’61ನೇ ಅಖಿಲ ಭಾರತ ಸಹಕಾರಿ ಸಪ್ತಾಹ’ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ‘ಸಹಕಾರಿ ಮಾರಾಟ ಗ್ರಾಹಕ ಚಟುವಟಿಕೆ, ರೂಪಾಂತರ ಮತ್ತು ಮೌಲ್ಯವರ್ಧನೆ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಮಹಾತ್ಮಾ ಗಾಂಧೀಜಿ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಕಂಡಿದ್ದ ಸುಂದರ ಭಾರತ ನಿರ್ಮಾಣ ಕನಸು ನನಸು ಮಾಡಲು ಯುವಜನತೆಗೆ ನೈಜ ಇತಿಹಾಸ ತಿಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದ ಅವರು ಆರೋಗ್ಯ ನೆಪದಲ್ಲಿ ಗುಟ್ಕಾ ನಿಷೇಧಕ್ಕೆ ಮುಂದಾದರೆ ಅಡಿಕೆ ಬೆಳೆಗಾರರಿಗೆ ಹೊಡೆತ ಬೀಳುತ್ತದೆ. ಪ್ರಾಣಿಹಿಂಸೆ ನೆಪದಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳ ಸ್ಥಗಿತಗೊಂಡರೂ ಕೃಷಿಕರಿಗೆ ಅನ್ಯಾಯ ಮಾಡಿಂತಾಗುತ್ತದೆ ಎಂದು ಅವರು ವಿಷ್ಲೇಶಿಸಿದರು.
ಅನಗತ್ಯ ವದಂತಿ ಹರಡುವ ಮೂಲಕ ಕೃಷಿಕರಲ್ಲಿ ಗೊಂದಲ ಮೂಡಿಸುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ದ್ವೇಷಿಸುವವರು ನಿಜಕ್ಕೂ ದೇಶದ್ರೋಹಿಗಳು ಎಂದು ಹೇಳಿದ ಅವರು ರಾಜ್ಯದಲ್ಲಿ ರೈತರ ಹಿತ ಕಾಪಾಡುವಲ್ಲಿ ಪ್ರಸಕ್ತ ಸರ್ಕಾರವು ಕಟಿಬದ್ಧವಾಗಿದೆ ಎಂದು ಭರವಸೆ ನೀಡಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ವಿಮಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಭತ್ತದಿಂದ ಅಡಿಕೆ ಮತ್ತು ರಬ್ಬರ್ ಕೃಷಿಗೆ ರೂಪಾಂತರಗೊಂಡ ಕೃಷಿಕರು ಗದ್ದೆ ಮತ್ತು ಗುಡ್ಡ ಪ್ರದೇಶ ಅಗೆದು ನಿವೇಶನ ರೂಪದಲ್ಲಿ ಮಾರಾಟ ಮಾಡುತ್ತಿರುವುದು ವಿಷಾಧನೀಯ ಎಂದರು. ಇನ್ನೊಂದೆಡೆ ಸಹಕಾರಿ ಬ್ಯಾಂಕಿನ ಬೆಳವಣಿಗೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ)ನ ಕೆಲವೊಂದು ನಿಯಮಾವಳಿ ತೊಡಕಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಮಿಶ್ರಬೆಳೆಗೆ ಕೃಷಿಕರನ್ನು ಪ್ರೋತ್ಸಾಹಿಸುವುದರ ಜೊತೆಗೆ ರೈತರಲ್ಲಿ ದೂರದರ್ಶತ್ವದ ಚಿಂತನೆಯೊಂದಿಗೆ ಆರ್ಥಿಕ ಸ್ವಾವಲಂಬನೆ ಮೂಲಕ ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ನವೋದಯ ಸ್ವಸಹಾಯ ಸಂಘಗಳು ಕೂಡಾ ಶ್ರಮಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಮತ್ತಿತರರು ಮಾತನಾಡಿ, ಸಹಕಾರಿ ಬ್ಯಾಂಕಿನ ಏಳು ಬೀಳುಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ ಆಚಾರ್, ಮಂಗಳೂರು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ, ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಅಮ್ಮು ರೈ ಹರ್ಕಾಡಿ ಮತ್ತಿತರರು ಇದ್ದರು.
ಆರಂಭದಲ್ಲಿ ಹಿರಿಯ ಸಹಕಾರಿ ಪಿ.ಜಿನರಾಜ ಅರಿಗ ಅವರು ವಿಮಾ ಸಪ್ತಾಹ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಇದೇ ವೇಳೆ ಕಾವಳಪಡೂರು, ವಾಮದಪದವು, ಮಣಿನಾಲ್ಕೂರು ಪತ್ತಿನ ಸಹಕಾರಿ ಸಂಘಗಳ ವತಿಯಿಂದ ರಾಜ್ಯ ಸಹಕಾರಿ ಫೆಡರೇಶನ್ಗೆ ‘ಶೈಕ್ಷಣಿಕ ನಿಧಿ’ ಸಲ್ಲಿಸಿದರು.
ಸಂಘದ ಅಧ್ಯಕ್ಷ ಕೆ.ಪ್ರಮೋದ್ ಕುಮಾರ್ ರೈ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಾಸು ಸಪಲ್ಯ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಮತ್ತು ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾವಿತ್ರಿ ರೈ ಕಾರ್ಯಕ್ರಮ ನಿರೂಪಿಸಿದರು.
