Published On: Thu, Sep 8th, 2022

ಐಲೇಸಾ-ದಿ ವಾಯ್ಸ್ ಆಫ್ ಓಷನ್ ಸಂಸ್ಥೆಯಿಂದ ಅರ್ಥಪೂರ್ಣ ದ್ವಿತೀಯ ಹುಟ್ಟುಹಬ್ಬ ಆಚರಣೆ ಕಾವ್ಯ ಬೆಳಕನ್ನು ಚೆಲ್ಲುವ ಸಾಧನವಾಗಲಿ : ಸುಬ್ರಾಯ ಚೊಕ್ಕಾಡಿ

ಮುಂಬಯಿ: “ಮನಸ್ಸಿಗೆ ವಯಸ್ಸಾಗಬಾರದು, ದೇಹಕ್ಕೆ ವಯಸ್ಸಾಗೋದು ಸಹಜ, ಚಿಂತನ ಮಂಥನದಿಂದ ಮನಸ್ಸನ್ನು ಸದಾ ಯೌವನವಾಗಿಡಲು ಸಾದ್ಯವಿದೆ. ಕವನಗಳು, ಸುಲಭ ತುತ್ತಿನಲ್ಲಿ ಜೀರ್ಣವಾಗಬೇಕೆಂದೇನಿಲ್ಲ, ಕವನವನ್ನು ಅರ್ಥೈಸಿ ಕೊಳ್ಳುವುದಕೊಸ್ಕರ, ಅದನ್ನ ಮತ್ತೆಮತ್ತೆ ಓದಬೇಕೆನ್ನುವ ಮನೋಭಿಲಾಷೆ ಹುಟ್ಟು ಹಾಕಿದರೆ, ಕವನದ ಮಂಥನ ಸಾಧ್ಯವಾಗುತ್ತದೆ. ಕಾವ್ಯ ಬರೇ ಕನ್ನಡಿಯಲ್ಲಿರುವ ಪ್ರತಿಬಿಂಬವಷ್ಟೆ ಆಗದೆ, ಅದು ಸಮಾಜಕ್ಕೆ ಬೆಳಕನ್ನು ಚೆಲ್ಲುವ ಸಾಧನವಾದರೆ ಅದೇ ಕಾವ್ಯದ ಸಾರ್ಥಕತೆ” ಎಂದು ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ನಾಡಿನ ಶ್ರೇಷ್ಠ ಕವಿ ಸುಬ್ರಾಯ ಚೊಕ್ಕಾಡಿ ನುಡಿದರು.

ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆ ತನ್ನ ಎರಡನೇ ಹುಟ್ಟುಹಬ್ಬದ ಶುಭಾವಸರದಲ್ಲಿ ಕಳೆದ ಭಾನುವಾರ ಸುಳ್ಯ ಹಳೇ ಗೇಟು ಅಲ್ಲಿನ ಚೊಕ್ಕಾಡಿ ಅವರ ಪ್ರಕೃತಿ" ನಿವಾಸ, ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಇಲ್ಲಿ ಆಯೋಜಿಸಿದ್ದವಯೋ ಸಮ್ಮಾನ್’ ವಿಶಿಷ್ಟ ಗೌರವ ಸ್ವೀಕರಿಸಿ ಚೊಕ್ಕಾಡಿ ಮಾತನಾಡಿದರು.

ಐಲೇಸಾ ತಂಡವು ಸುಬ್ರಾಯ ಚೊಕ್ಕಾಡಿ ಅವರ ೮೩ನೆ ವಯೋನಡಿಗೆಯ ಸ್ಮರಣಾರ್ಥ, ಕಾವ್ಯ ಸಂವಾದ ನಡೆಸಲಾಗಿ ಕವಿ ಪರಿಸರ ಪ್ರಿಯನಾಗಿರುವುದರಿಂದ, ಹಸಿರು ಸಸಿಗಳನ್ನು ವಿತರಿಸಿ, ಚೊಕ್ಕಾಡಿ ಅವರ ನೆನಪು ಮರುಕಳಿಸುವ ಅವರ ಅತ್ಯಂತ ಪ್ರಿಯವಸ್ತುಗಳನ್ನು ವಿಶೇಷ ಉಡುಗೊರೆಗಳಾಗಿ ನೀಡಿ, ಚೊಕ್ಕಾಡಿ ಅವರ ಸಾಧನ ವಯಸ್ಸಿನ ಅನುಗುಣ ರೂಪಾಯಿ ೮೩,೦೦೦/- ಗುರುದಕ್ಷಿಣೆಯನ್ನು ವಯೋ ಸಮ್ಮಾನ್ ಹೆಸರಿನೊಂದಿಗೆ ಅತ್ಯಂತ ಸರಳ ರೀತಿಯಲ್ಲಿ ಸನ್ಮಾನಿಸಿ ಕವಿಯ ಮನಸ್ಸನ್ನು ಮುದಗೊಳಿಸಿ ಕೊಟ್ಟು ಕವಿಯ ಮನ ಪುಳಕಿತಗೊಳಿಸಿದರು.

ಪ್ರಸಿದ್ಧ ವಾಗ್ಮಿ ಮತ್ತು ಚಿಂತಕ ವೈ.ವಿ.ಗುಂಡೂರಾವ್ ವಿಶೇಷ ಅತಿಥಿಯಾಗಿದ್ದು ಸುಬ್ರಾಯ ಚೊಕ್ಕಾಡಿ ಮನೆಗೆ ಭೇಟಿಕೊಟ್ಟು, ಉಪಯುಕ್ತ ಕಾವ್ಯ ಸಂವಾದ ನಡೆಸಿದರು. ಹಿಂದಿನ ಮುನಿಗಳಂತೆ ಪ್ರಕೃತಿ ಮಡಿಲಲ್ಲಿ ಕಾವ್ಯ ತಪಗೈದು, ಅಂಗಾಂಗಗಳಲ್ಲಿ ಕಾವ್ಯ ಸಂಘ ಬೆಸೆದು, ಸಾರಂಗ ದೇವಮುನಿಯಂತೆ ಶ್ರೇಷ್ಟರಾಗಿದ್ದಾರೆ. ಚೊಕ್ಕಾಡಿ ಅವರ ಕವನಗಳು, ಮನ ನಿರ್ಮಲಗೊಳಿಸಿ, ಚೊಕ್ಕಮಾಡಿ ಸಂತೃಪ್ತಿ ನೀಡುತ್ತವೆ. ಎಲ್ಲಿ ಅವಮಾನ ಆಗಿದೆಯೋ ಅಲ್ಲೇ ಸನ್ಮಾನ ಸಿಗಬೇಕು ಎನ್ನುವ ಅವರ ಮನದಭಿಲಾಷೆ ಇವತ್ತು ಐಲೇಸಾ ತಂಡ ಅವರಮನೆಗೆ ಬಂದು ಅವರನ್ನು ಸತ್ಕರಿಸಿ ನೆರವೇರಿದೆ ಎಂದು ಅವರ ಒಂದೊಂದು ನುಡಿಮುತ್ತುಗಳು, ಅನುಸರಣ ಯೋಗ್ಯವೆಂದು, ಚೊಕ್ಕಾಡಿ ಅವರ ಸುಮಾರು ೫೦ ಆಯ್ದ ನುಡಿಮುತ್ತುಗಳ ಸಂಗ್ರಹವನ್ನು ಅವರಿಗೆ ಅರ್ಪಿಸಿದರು.

ರಂಗಕರ್ಮಿ, ಜೀವನ್‌ರಾಂ ಸುಳ್ಯ, ಮಾತನಾಡಿ ‘ಸುಬ್ರಾಯ ಅವರು, ನನ್ನ ಪ್ರತಿಹೆಜ್ಜೆಯಲ್ಲೂ ಗುರುಗಳಾಗಿ ಮಾರ್ಗದರ್ಶನ ಇತ್ತವರು. ಮುಂದಕ್ಕೂ ಅವರ ಮಾರ್ಗದರ್ಶಿತ್ವ ನಮಗೆ ಬೆಳಕಾಗಲಿ’ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮುಂಬಯಿಯಲ್ಲಿನ ಹೆಸರಾಂತ ಬರಹಗಾರ ಪೇತ್ರಿ ವಿಶ್ವನಾಥ್ ಶೆಟ್ಟಿ ಅವರ ತ್ಯಾಂಪರನ ಡೋಲು'ಕಥೆ ಆಧಾರಿತಗಿಡ್ಡಿ’ ನಾಟಕವನ್ನು ರತ್ನವರ್ಮ ತುಳು ನಾಟಕ ಪ್ರಶಸ್ತಿ ವಿಜೇತೆ ಅಕ್ಷತಾ ಪೆರ್ಲ ಕಾಸರಗೋಡು ರಚಿತ ಕೃತಿಯನ್ನು ಸುಬ್ರಾಯ ಚೊಕ್ಕಾಡಿ ಬಿಡುಗಡೆ ಗೊಳಿಸಿದರು.

ನಾಟಕದ ಒಂದು ದೃಶ್ಯವನ್ನು ಆಕಾಶವಾಣಿ ಉದ್ಗೋಷಕ ವಿನೋದ್ ಮೂಡಗದ್ದೆ ಮತ್ತು ರಂಗನಟ ಸೂರಿ ಮಾರ್ನಾಡ್ ರಚಿಸಿ ತೇಜು ಕೊಲ್ಲಮೊಗ್ರ ಅವರ ಹಿನ್ನೆಲೆ ಗಾಯನದ ಮಣ್ಣಬಾಜನ, ತುಳುಹಾಡಿನ, ಅರೆಭಾಷೆ ಅವತರಣಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಸುಬ್ರಾಯ ಚೊಕ್ಕಾಡಿ ಅವರ ಹಾಡು ‘ಕೆರಳಿಸದಿರು ಹೆಣ್ಣೇ…’ ಆಡಿಯೋ ಆಲ್ಬಂ, ಮಿಥುನ್ ರಾಜ್ ಅವರ ದ್ವನಿಯಲ್ಲಿ ಬಿಡುಗಡೆ ಗೊಳಿಸಲಾಯಿತು.

ಸಾಹಿತ್ಯ ಪರಿಷತ್ತ್ ಸುಳ್ಯ ಇದರ ಚಂದ್ರಶೇಖರ ಪೇರಾಲು, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ನಿಟ್ಟೆ ಯೂನಿವರ್ಸಿಟಿ ಇದರ ಡಾ| ಸಾಯಿಗೀತಾ, ಎಂಆರ್‌ಪಿಎಲ್‌ನ ಪ್ರಧಾನ ಪ್ರಬಂಧಕ ವೀಣಾ ಟಿ.ಶೆಟ್ಟಿ ಸಾಮಾನಿ, ಮುಂಬಯಿಯ ಸಾಹಿತಿ ಪೇತ್ರಿ ವಿಶ್ವನಾಥ್ ಶೆಟ್ಟಿ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಜೀಟಿಗೆ ಸಿನಿಮಾದ ನಿರ್ದೇಶಕ ಸಂತೋಷ್ ಮಾಡ, ಅರೆಭಾಷೆ ಕನ್ನಡ ಸಾಹಿತಿ ಚಂದ್ರಾವತಿ ಬಡ್ಡಡ್ಕ, ತೇಜು ಕೊಲ್ಲಮೊಗ್ರ, ಆಕಾಶವಾಣಿ ಉದ್ಗೋಷಕ ವಿನೋದ್ ಮೂಡಗದ್ದೆ, ಅಕ್ಷತಾರಾಜ್ ದೇರ್ಲ, ತುಳು ಕನ್ನಡ ಕವಿ ಸಾಹಿತಿ ಶಾಂತಾರಾಮ ಶೆಟ್ಟಿ, ನಮಿತಾ ಅನಂತ್, ರೋಟರಿ ಕ್ಲಬ್‌ನ ಯೋಗಿತಾ, ಕಲಾಪ್ರೆಮಿ ಎಂ.ಬಿ ಸದಾಶಿವ, ಜಯಪ್ರಕಾಶ್ ಕುಕ್ಕೆಟಿ, ಪತ್ರಕರ್ತ ತೇಜೇಶ್ವರ್ ಕುಂದಲ್ಪಾಡಿ, ಜೀವನ್‌ರಾಂ ಸುಳ್ಯ ಮತ್ತು ಐಲೇಸಾ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದೇಶಗಳಿಂದ ಸರ್ವೋತಮ ಶೆಟ್ಟಿ ಅಬುಧಾಬಿ, ರವಿ ಶೆಟ್ಟಿ ಮೂಡಂಬೈಲು (ಕತಾರ್), ಶ್ರೀವಲ್ಲಿ ರೈ ಮಾರ್ಟೆಲ್ (ಫ್ಲೋರಿಡಾ), ಖ್ಯಾತ ಪತ್ರಕರ್ತ ಜೋಗಿ, ಸಾಹಿತಿ ಜಯಂತ್ ಕಾಯ್ಕಿಣಿ, ಕವಿ ಡುಂಡಿರಾಜ್, ಮುಂಬಯಿ ವಿಶ್ವವಿದ್ಯಾಲಯದ ಡಾ| ಜಿ.ಎನ್ ಉಪಾಧ್ಯ, ಟಿವಿ ಪತ್ರಕರ್ತ ರಾಘವ ಸೂರ್ಯ ಮತ್ತಿತರ ಗಣ್ಯರು ವಿಡಿಯೋ ಮುಖಾಂತರ ಚೊಕ್ಕಾಡಿ ಅವರಿಗೆ ಶುಭಹಾರೈಸಿದರು. ಅನಂತ್ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಐಲೇಸಾ ತಂಡದ ಮುಂಬಯಿ ಸಂಚಾಲಕ ಸುರೇಂದ್ರ ಮಾರ್ನಾಡ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter