Published On: Tue, Sep 6th, 2022

ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ

ಚಿತ್ರದುರ್ಗ: ಮತಾಂತರ ಮಾಡುವುದೇ ಒಡನಾಡಿ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ ಎಂದು ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆ ಕಿಡಿಕಾರಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಬಂಧನ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಒಡನಾಡಿ ಸಂಸ್ಥೆಯು ಶೋಷಿತ ಸಮುದಾಯಗಳನ್ನು ಬಳಸಿಕೊಂಡು ಮಿಸ್ ಯೂಸ್ ಮಾಡಿಕೊಳ್ಳುತ್ತಿದೆ. ಇದು ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರವಾಗಿದೆ. ಒಡನಾಡಿ ಸಂಸ್ಥೆಯವರು ಎಲ್ಲಾ ಕಡೆ ಏಜೆಂಟರನ್ನು ಬಿಟ್ಟಿದ್ದಾರೆ. ಈ ಎಲ್ಲಾ ಕಡೆ ಇರುವ ಏಜೆಂಟರು ಅವರಿಗೆ ಮಾಹಿತಿ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳ ಕೈಗೊಂಬೆ ಒಡನಾಡಿ ಸಂಸ್ಥೆಯಾಗಿದ್ದು, ಒಡನಾಡಿಯವರು ಹೆಚ್ಚಾಗಿ ಹಣವಂತರನ್ನು ಟಾರ್ಗೆಟ್ ಮಾಡುತ್ತಾರೆ. ಚಿತ್ರನಟ ಸಾಧು ಕೋಕಿಲ, ಮಂಡ್ಯ ರಮೇಶ್ ಸಹ ಒಡನಾಡಿ ಸಂಸ್ಥೆ ವಿರುದ್ಧ ಕೇಸ್ ಹಾಕಿದ್ದರು. ಅದು ಇನ್ನೂ ವಿಚಾರಣೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ಇವರ ಮೇಲೆ ಅನೇಕ ದೌರ್ಜನ್ಯದ ಕೇಸುಗಳಿವೆ ಎಂದು ಆರೋಪಿಸಿದರು.

ಸಾಮಾನ್ಯವಾಗಿ ಒಡನಾಡಿ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಇರುವವರ ವಿರುದ್ಧ ಷಡ್ಯಂತ್ರ ಮಾಡುತ್ತಾರೆ. ಇವರಿಂದ ಹಿಂದೂ ಧರ್ಮವನ್ನು ಒಡೆಯುವಂತ ಕೆಲಸವಾಗಿದ್ದು, ಸಾಮರಸ್ಯ ಕೆಡಿಸುವಂತ ಕೆಲಸವನ್ನೂ ಮಾಡುತ್ತಿದ್ದಾರೆ. ಇದರ ಜೊತೆಗೆ ಹಿಂದೂಗಳ ಮಧ್ಯೆಯೇ ಮೇಲ್ಜಾತಿ, ಕೆಳಜಾತಿ ಎಂಬ ಭೇದ ಸೃಷ್ಟಿ ಮಾಡುತ್ತಿದ್ದು, ಶೋಷಿತ ಹೆಣ್ಣು ಮಕ್ಕಳನ್ನು ಮತಾಂತರ ಮಾಡುತ್ತಿದ್ದಾರೆ ಎಂದರು.

ಮತಾಂತರದ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಒಡನಾಡಿ ಸಂಸ್ಥೆಗೆ ವಿದೇಶದ ಕ್ರಿಶ್ಚಿಯನ್ ಮಿಷಿನರಿಗಳಿಂದ ಹಣ ಬರುತ್ತದೆ. ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ – ಪರಶುರಾಮ್ ಅವರನ್ನು ತನಿಖೆಗೆ ಒಳಪಡಿಸಬೇಕು. ಇವರಿಗೆ ವಿದೇಶದಿಂದ ಹಣ ಬರುತ್ತದೆ. ಇವರ ಅಕೌಂಟನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು. ಒಡನಾಡಿ ಸಂಸ್ಥೆಯ ವಿರುದ್ಧ ನಮ್ಮ ಹೋರಾಟ ಸದಾ ನಡೆಯುತ್ತದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಸೂಕ್ತ ತನಿಖೆ ನಡೆಸಬೇಕು. ಈ ಬಗ್ಗೆ ಗೃಹಮಂತ್ರಿಯನ್ನು ಭೇಟಿಯಾಗಿ ವಿನಂತಿ ಮಾಡುತ್ತೇವೆ ಎಂದು ತಿಳಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter