Published On: Tue, Aug 30th, 2022

ಬಂಟ್ವಾಳ: ಸಿಪಿಐ ೨೪ನೇ ಜಿಲ್ಲಾ ಸಮ್ಮೇಳನ, ದೇಶಕ್ಕೆ ಪ್ರಧಾನಿ ಮೋದಿ ಕೊಡುಗೆ ವಿನಾಶ ಮಾತ್ರ: ಡಾ.ಸಿದ್ಧನಗೌಡ ಪಾಟೀಲ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ಇದರ ೨೪ನೇ ಜಿಲ್ಲಾ ಸಮ್ಮೇಳನದ ಪ್ರಯುಕ್ತ ಸೋಮವಾರ ಆಕರ್ಷಕ ಮೆರವಣಿಗೆ ನಡೆಯಿತು.

ಬಂಟ್ವಾಳ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ದೇಶದ ವಿಕಾಸಕ್ಕೆ ಬದಲಾಗಿ ದೇಶದ ವಿನಾಶಕ್ಕೆ ಕಾರಣೀಭೂತವಾಗಿದೆ. ಇಂತಹ ದುರಾಡಳಿತ ಮತ್ತು ಬಂಡವಾಳಶಾಹಿ ಪರ ಸರ್ಕಾರ ಕಿತ್ತೊಗೆಯಲು ಕಮ್ಯೂನಿಸ್ಟ್ ಕೆಂಬಾವುಟ ಹಿಡಿದು ಹೋರಾಟ ಮುಂದುವರಿಯಬೇಕು. ದೇಶದಲ್ಲಿ ಕಮ್ಯೂನಿಸ್ಟ್ ಬೆಳೆದರೆ ಮಾತ್ರ ಹೊಲದಲ್ಲಿ ಬೆಳೆಯೂ ಕಂಡು ಬರುತ್ತದೆ. ಬಿಜೆಪಿ-ಆರ್ ಎಸ್ ಎಸ್ ಬೆಳೆದರೆ ಬಡವರ ರಕ್ತ ಮಾತ್ರ ಹರಿಯಲಿದೆ ಎಂಬ ನೈಜ ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ನಡೆಯಬೇಕು ಸಿಪಿಐ ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಡಾ. ಸಿದ್ಧನಗೌಡ ಪಾಟೀಲ್ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಸೋಮವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ಇದರ ೨೪ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಹತ್ಯೆ ಮಾಡಿದ ಗೋಡ್ಸೆಯ ಗುರು ಸಾವರ್ಕರ್ ಇಂದು ಹೋರಾಟಗಾರನಾಗಿ ಪಠ್ಯ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ದೇಶದ ದುರಂತ. ಬಿಜೆಪಿ ಮತ್ತು ಕಾರ್ಪೊರೇಟ್ ಕಂಪೆನಿಗಳು ನಮ್ಮ ಚಳವಳಿ ದಮನಿಸಲು ಎಷ್ಟೇ ಪ್ರಯತ್ನಪಟ್ಟರೂ ಕಮ್ಯೂನಿಸ್ಟ್ ಬಾವುಟ ಹಿಡಿದ ಕಾರ್ಮಿಕರ ಮತ್ತು ರೈತ ಚಳವಳಿ ನಿಲ್ಲುವುದಿಲ್ಲ ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಭಾರತ ಬದಲಾಗಿ ಅಚ್ಚೇ ದಿನ್ ಯಾರಿಗೆ ಬಂದಿದೆ ಎಂದು ಉದ್ಯೋಗವೇ ಇಲ್ಲದ ಯುವಜನತೆ ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಸಂಸ್ಥೆ ಮಾರಾಟ ಮತ್ತು ಖಾಸಗೀಕರಣ ವಿರುದ್ಧ ಯುವಜನತೆ ಹೋರಾಟ ನಡೆಸಬೇಕು ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ನೇತೃತ್ವದ ತಂಡ ಕ್ರಾಂತಿ ಗೀತೆ ಹಾಡಿದರು.

ಪ್ರಮುಖರಾದ ಪುಷ್ಪರಾಜ್ ಬೋಳಾರ್, ಎ.ಪ್ರಭಾಕರ ರಾವ್, ಭಾರತಿ ಶಂಭೂರು, ಕರುಣಾಕರ ಎಂ., ಬಿ.ಬಾಬು ಭಂಡಾರಿ, ರಮೇಶ್ ಕುಮಾರ್ ಮೂಡಿಗೆರೆ, ಜಿಲ್ಲಾ ಸಹ ಕಾರ್ಯದರ್ಶಿ ವಿ.ಸೀತಾರಾಮ ಬೇರಿಂಜ ಇದ್ದರು. ಆರಂಭದಲ್ಲಿ ಬಿ.ಸಿ.ರೋಡಿನ ಕೈಕಂಬದಿಂದ ಗಾಣದಪಡ್ಪು ಸಭಾಂಗಣ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಮಹಿಳೆಯರು ಸಹಿತ ಅಪಾರ ಮಂದಿ ಪಾಲ್ಗೊಂಡರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter