Published On: Sun, Aug 28th, 2022

ದೇಶದ ಅತಿ ಎತ್ತರದ ವಸತಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ

ಲಕ್ನೋ: ನೋಯ್ಡಾದ ಸೆಕ್ಟರ್ 93ಎ ನಲ್ಲಿರುವ ದೇಶದ ಅತಿ ಎತ್ತರದ ಅವಳಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಮಧ್ಯಾಹ್ನ 2:30ಕ್ಕೆ ನೋಯ್ಡಾ ಪ್ರಾಧಿಕಾರ ಈ ಬೃಹತ್ ಕಟ್ಟಡವನ್ನು ಉರುಳಿಸಲಿದೆ.

ಕೇವಲ 9 ನಿಮಿಷಕ್ಕೆ 900ಕ್ಕೂ ಅಧಿಕ ಮನೆಗಳ ಈ ಅಪಾರ್ಟ್ಮೆಂಟ್ ಉಡೀಸ್ ಆಗಲಿದೆ. ಕಟ್ಟಡ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಸೂಪರ್‌ಟೆಕ್ ಸಂಸ್ಥೆ ನಿರ್ಮಿಸಿರುವ ಈ ಕಟ್ಟಡದ ಧ್ವಂಸಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ 1 ವಾರದಿಂದಲೂ ಕಟ್ಟಡ ಧ್ವಂಸಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.

ದೆಹಲಿಯ ಕುತುಬ್‌ಮಿನಾರ್‌ಗಿಂತಲೂ ಎತ್ತರದಲ್ಲಿರುವ ಈ ಟವರ್‌ಗೆ 1,200 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಿ 7.5 ಲಕ್ಷ ಚದರ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. 20 ಕೋಟಿ ರೂ. ಖರ್ಚು ಮಾಡಿ ಅದೇ ಕಟ್ಟಡವನ್ನು ಇದೀಗ ಕೆಡವಲಾಗುತ್ತಿದೆ.

ಎಡಿಫೈಸ್ ಎಂಜಿನಿಯರಿಂಗ್ ಎಂಬ ಸಂಸ್ಥೆ ಈ ಕಟ್ಟಡ ಧ್ವಂಸದ ಹೊಣೆ ಹೊತ್ತಿದ್ದು, 100 ಕೋಟಿ ವಿಮೆ ಮಾಡಿಸಿದೆ. ಹರಿಯಾಣದ ಹಿಸ್ಸಾರ್‌ನ ಬ್ಲಾಸ್ಟಿಂಗ್ ತಜ್ಞ ಚೇತನ್ ದತ್ತಾ 100 ಮೀ. ದೂರದಿಂದ ಬ್ಲಾಸ್ಟ್‌ಗೆ ಸ್ವಿಚ್ ಒತ್ತಲಿದ್ದಾರೆ. ಇದು ಕನಸು ನನಸಾದ ಕ್ಷಣವಾಗಲಿದೆ ಎಂದು ಚೇತನ್ ಹೇಳಿದ್ದಾರೆ. 

ಕಟ್ಟಡ ಧ್ವಂಸದಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿ ಆಗದ ರೀತಿ 4 ಹಂತದಲ್ಲಿ ಕಬ್ಬಿಣದ ಮೆಶ್, 2 ಹಂತದಲ್ಲಿ ಬ್ಲಾಂಕೆಟ್ ಹಾಕಲಾಗಿದೆ. ಅವಶೇಷಗಳು ಸಿಡಿಸಿದರೂ, ಧೂಳು ಎದ್ದರೂ ಸಮಸ್ಯೆ ಆಗದಂತೆ ಪ್ಲಾನ್ ಮಾಡಲಾಗಿದೆ. ಈ ಕಟ್ಟಡದ ಅವಶೇಷಗಳ ತೆರವಿಗೆ 3 ತಿಂಗಳು ಬೇಕಾಗಲಿದೆ.

ಕಟ್ಟಡ ಧ್ವಂಸಕ್ಕೆ ಆಗಸ್ಟ್ 21ಕ್ಕೆ ಮೊದಲು ದಿನಾಂಕ ನಿಗದಿಯಾಗಿತ್ತು. ಆದರೆ ವಾತಾವರಣದ ಕಾರಣ ಕೊಟ್ಟಿದ್ದ ನೋಯ್ಡಾ ಪ್ರಾಧಿಕಾರ ಕಾಲಾವಕಾಶ ವಿಸ್ತರಣೆಗೆ ಮನವಿ ಮಾಡಿತ್ತು. ಕಟ್ಟಡ ನೆಲಸಮ ಮಾಡಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 4ರ ವರೆಗೆ ಅವಕಾಶ ಕೊಟ್ಟಿದ್ದರೂ ನಾಳೆಯೇ ಬ್ಲಾಸ್ಟ್ ಮಾಡಲಾಗುತ್ತಿದೆ. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter