ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ ಮೂರು ಸರ್ಕಾರಿ ಶಾಲೆ ದತ್ತು ಸ್ವೀಕಾರ: ಮಾಜಿ ಸಚಿವ ನಾಗರಾಜ ಶೆಟ್ಟಿ
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಶನಿವಾರ ನಡೆದ ಶಿಕ್ಷಕ-ರಕ್ಷಕ ಸಭೆಯಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅವರು ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಮತ್ತು ಶ್ರೀಶ ಜೈನ್ ಇವರನ್ನು ಅಭಿನಂದಿಸಿದರು.

ಬಂಟ್ವಾಳ ಗ್ರಾಮೀಣ ಪ್ರದೇಶದಲ್ಲಿ ಬಡ ಜನತೆಗೆ ಸಂಸ್ಕಾರ ಭರಿತ ಮತ್ತು ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತಿತರ ಪಠ್ಯೇತರ ಚಟುವಟಿಕೆಯಲ್ಲಿಯೂ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವ ಮೂಲಕ ಅವರನ್ನು ದೇಶಕ್ಕೆ ಆಸ್ತಿಯನ್ನಾಗಿಸಬೇಕು. ಇದಕ್ಕಾಗಿ ಕೊಯಿಲ, ಸಿದ್ಧಕಟ್ಟೆ ಮತ್ತು ಸರಪಾಡಿ ಸರ್ಕಾರಿ ಪ್ರೌಢಶಾಲೆಗಳನ್ನು ದತ್ತು ಸ್ವೀಕರಿಸಲು ಚಿಂತನೆ ನಡೆಸಲಾಗಿದೆ ಎಂದು ಮನ್ ದೇವ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಶನಿವಾರ ನಡೆದ ಶಿಕ್ಷಕ-ರಕ್ಷಕ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ವೇಳೆ ರಾಜ್ಯ ಮಟ್ಟದಲ್ಲಿ ಈಟಿ ಎಸೆತ ಮತ್ತು ಉದ್ದ ಜಿಗಿತ ವಿಭಾಗದಲ್ಲಿ ಚಿನ್ನ ಗೆದ್ದ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಮತ್ತು ಶ್ರೀಶ ಜೈನ್ ಸಹೋದರಿಯನ್ನು ಅಭಿನಂದಿಸಿದರು.
ಸಂಸ್ಥೆ ಸಂಚಾಲಕ ವಿಜಯ ಕುಮಾರ್ ಚೌಟ, ಕಾರ್ಯದರ್ಶಿ ಸಬಿತಾ ಲವಿನಾ ಪಿಂಟೋ, ಮುಖ್ಯಶಿಕ್ಷಕ ಗಿಲ್ಬರ್ಟ್ ಡಿಸೋಜ ಶುಭ ಹಾರೈಸಿದರು. ಗುಣಶ್ರೀ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪೂಜಾ ಮತ್ತು ಲಾವಣ್ಯ ಇದ್ದರು. ಮುಖ್ಯಶಿಕ್ಷಕಿ ಜಯಶ್ರೀ ಸ್ವಾಗತಿಸಿ, ಶಿಕ್ಷಕಿ ರೇಶ್ಮಾ ಲೋಬೋ ವಂದಿಸಿದರು. ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.