ತುಳು ಸಂಘ ಬರೋಡಾ ಸಂಭ್ರಮಿಸಿದ ಅಮೃತ ಮಹೋತ್ಸವ ಸ್ವಾತಂತ್ರ‍್ಯೋತ್ಸವ ಅಭಿವ್ಯಕ್ತ ಸ್ವಾತಂತ್ರ್ಯ ನಮ್ಮ ಹಿರಿಮೆಯಾಗಿದೆ: ಶಶಿಧರ ಬಿ.ಶೆಟ್ಟಿ
ಬರೋಡಾ : ಗುಜರಾತ್ ರಾಜ್ಯದ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‌ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿ ಇದರ ಸಭಾಗೃಹದಲ್ಲಿ ಇಂದಿಲ್ಲಿ ಸೋಮವಾರ ತುಳು ಸಂಘ ಬರೋಡಾ ಸಂಸ್ಥೆಯು ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವದೊಂದಿಗೆ ರಾಷ್ಟ್ರದ ೭೬ನೇ ಸ್ವಾತಂತ್ರ‍್ಯೋತ್ಸವವನ್ನು ಅದ್ದೂರಿಯಾಗಿ ಸಂಭ್ರಮಿಸಿತು.
ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ (ಬೆಳ್ತಂಗಡಿ) ಇವರ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಸಂಘದ ಸಾಂಸ್ಕೃತಿಕ ಕೇಂದ್ರದ ತುಳು ಚಾವಡಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಸಂಭ್ರಮದಲ್ಲಿ ಸಂಘದ ಬಾಲ ಪ್ರತಿಭೆಗಳಾದ ಕು| ದೀಕ್ಷಿತ್ ಶೆಟ್ಟಿ, ಕು| ವಿಶ್ಮಿತಾ ಪೂಜಾರಿ, ಕು|ಕಾವ್ಯ ಶೆಟ್ಟಿ ಅತಿಥಿಗಳಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ನಾವು ಭಾರತದ ಪುಣ್ಯಭೂಮಿಯಲ್ಲಿ ಹುಟ್ಟು ಪಡೆದಿರುವುದೇ ನಮ್ಮ ಸೌಭಾಗ್ಯವಾಗಿದೆ. ವಿಶ್ವದಲ್ಲೇ ಇಂತಹ ಪುಣ್ಯಭೂಮಿ ಮತ್ತೊಂದಿಲ್ಲ ಅನ್ನುವುದು ಪ್ರತೀಯೋರ್ವ ಭಾರತೀಯನಿಗೆ ಹೆಮ್ಮೆಯೆಣಿಸಬೇಕು. ಆದುದರಿಂದ ನಾವೆಲ್ಲರೂ ಭಾರತಾಂಭೆಯ ಪ್ರತಿಷ್ಠೆಯ ಮಕ್ಕಳಾಗಿ ಸಾಮರಸ್ಯ, ಸೌಹಾರ್ದತೆಯಿಂದ ಬಾಳಬೇಕು. ಅಸಂಖ್ಯಾತ ಕ್ರಾಂತಿಕಾರರ ಹೋರಾಟದ ಫಲವೇ ಸ್ವತಂತ್ರ ಭಾರತವಾಗಿದೆ. ಅಭಿವ್ಯಕ್ತ ಸ್ವಾತಂತ್ರ ್ಯ ನಮ್ಮ ಹಿರಿಮೆಯಾಗಿದೆ. ಆದ್ದರಿಂದ ಈ ಮಹಾನ್ ದೇಶದ ಘನತೆ ಕಾಪಾಡಿಕೊಂಡು ಬಾಳುವುದು ಪ್ರತೀಯೋರ್ವ ಭಾರತೀಯ ಪ್ರಜೆಯ ಕರ್ತವ್ಯವಾಗಬೇಕು. ಆ ಮೂಲಕ ರಾಷ್ಟ್ರದ ಘನತೆಯನ್ನು ಉನ್ನತಿಯ ಉತ್ತುಂಗಕ್ಕೆ ಏರಿಸಬೇಕು ಎಂದು ರಾಷ್ಟ್ರಪ್ರೇಮದ ಶಶಿಧರ ಬಿ.ಶೆಟ್ಟಿ ಸಂದೇಶವನ್ನಿತ್ತು ಶುಭಹಾರೈಸಿದರು.
ತುಳು ಸಂಘದ ಗೌ| ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ, ಕೋಶಾಧಿಕಾರಿ ವಾಸು ಪಿ.ಪೂಜಾರಿ, ಮಹಾವೀರ ಬಿ.ಜೈನ್, ಡಾ| ಶರ್ಮಿಳಾ ಎಂ.ಜೈನ್, ಪ್ರಮಿಳಾ ಶಶಿಧರ್ ಶೆಟ್ಟಿ, ಮದನ್‌ಕುಮಾರ್ ಮೂಡಿಗೆರೆ, ವಿಶಾಲ್ ಶಾಂತಾ, ರವೀಂದ್ರ ಶೆಟ್ಟಿ, ಕಾರ್ತಿಕ್ ಗೌಡ ಸೇರಿದಂತೆ ಮಹಿಳಾ ವಿಭಾಗದ ಸದಸ್ಯೆಯರು, ಇನ್ನಿತರ ಸಂಘಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕು| ಇಶಾನಿ ಶೆಟ್ಟಿ ಸ್ವಾಗತಿಸಿದರು. ಕು| ರಿದ್ಧಿ ಶೆಟ್ಟಿ ಮತ್ತು ಕು| ತನ್ವಿ ಶಾಂತಾ ಕಾರ್ಯಕ್ರಮ ನಿರೂಪಿಸಿದ್ದು ರಿದ್ಧಿ ಶೆಟ್ಟಿ ಧನ್ಯವದಿಸಿದರು. ಸಂಘದ ಮಹಿಳೆಯರು ಮತ್ತು ಮಕ್ಕಳು ರಾಷ್ಟ್ರಪ್ರೇಮ ಸಾರುವ ವೈಶಿಷ್ಟ್ಯಮಯ ಸಾಂಸ್ಕೃಂತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.