ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ. 01ರಂದು ಸೋಮವಾರ ಸ್ಥಳೀಯ ಶಾಲಾ ಮಕ್ಕಳಿಗಾಗಿ ಸರ್ಕಾರ ಪ್ರಾಯೋಜಿಸಿದ ‘ಗ್ರಾಮ ಚದುರಂಗ(ಚೆಸ್) ಆಡೋಣ ಅಭಿಯಾನ’ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿದರು. ಪಿಡಿಒ ಅನಿತಾ ಕ್ಯಾಥರಿನ್ ಸ್ವಾಗತಿಸಿದರು. ಹರೇಕಳ ಪಂಚಾಯತ್ ಪಿಡಿಒ ಯಶವಂತ ಬೆಳ್ಚಡ ಅವರು ಪಂದ್ಯಾಟದ ರೆಫ್ರಿಯಾಗಿದ್ದು, ಆಟದ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯ ದಿನೇಶ್ ಮತ್ತು ಕ್ರೀಡಾ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು. ಸ್ಥಳೀಯ ಚೆಸ್ ಪಟುಗಳಾದ ನವಾಝ್, ಚೇತನ್ ಮತ್ತು ರಶೀದ್ ಹಾಗೂ ಪಂಚಾಯತ್ ಸಿಬ್ಬಂದಿ ಸಹಕರಿಸಿದರು.

ಪಂದ್ಯಾಟದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ(ಗುರುಪುರ, ಉಳಾಯಿಬೆಟ್ಟು) ಮತ್ತು ಆಸುಪಾಸಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಪಾಲ್ಗೊಂಡಿದ್ದರು.

