ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿ ಪ್ರಕಟಿಸಿದ್ದು, ಜಾನಪದ ಕ್ಷೇತ್ರದ ಸಾಧಕ ಸಂಜೀವ ಬಂಗೇರ ತಲಪಾಡಿ, ನಿರ್ದೇಶಕ, ನಿರ್ಮಾಪಕ ಕೃಷ್ಣಪ್ಪ ಉಪ್ಪೂರು ಮತ್ತು ಸಾಹಿತಿ ಉಲ್ಲಾಸ ಕೃಷ್ಣಪೈ ಪುತ್ತೂರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದರು. ಗೌರವ ಪ್ರಶಸ್ತಿಗೆ ಮೂವರು ಹಿರಿಯ ಸಾಧಕರು, ವಿಶೇಷ ಬಾಲಪ್ರತಿಭಾ ಪುರಸ್ಕಾರ, ಯುವ ಸಾಧಕ ಪುರಸ್ಕಾರ, ಮಾಧ್ಯಮ ಪುರಸ್ಕಾರ, ಸಂಘಟನಾ ಪುರಸ್ಕಾರಕ್ಕೆ ರಾಜ್ಯ, ಹೊರ ರಾಜ್ಯ ಮತ್ತು ಹೊರ ರಾಷ್ಟ್ರ ಮಟ್ಟದಲ್ಲಿ ವಿಶೇಷವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದರು.

ಕವನ ಸಂಕಲನ ವಿಭಾಗದಲ್ಲಿ ಯೋಗೀಶ್ ಕಾಂಚನ್ ಬೈಕಂಪಾಡಿ ಅವರ ‘ತಂಞನ ಬೊಳ್ಳಿ’, ನಾಟಕ ವಿಭಾಗದಲ್ಲಿ ಅಕ್ಷತಾ ರಾಜ್ ಪೆರ್ಲ ಅವರ ಬೇಲಿ, ಸಾಪೊದ ಕಣ್ಣ್’, ಅಧ್ಯಯನ ವಿಭಾಗದಲ್ಲಿ ಡಾ. ಅಶೋಕ ಆಳ್ವ ಸುರತ್ಕಲ್ ಅವರ ‘ತುಳುನಾಡಿನ ಜಾನಪದ’ ಪ್ರಾಣಿ ಆಯ್ಕೆಯಾಗಿದೆ.

ವಿಶೇಷ ಪುರಸ್ಕಾರ: ಬಾಲಪ್ರತಿಭಾ ಪುರಸ್ಕಾರಕ್ಕೆ ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಜೀವಿಕಾ ಶೆಟ್ಟಿ ಮುಂಬಯಿ, ಸಾನ್ವಿ ಯುಎಸ್ಎ, ಯುವ ಸಾಧಕ ಪುರಸ್ಕಾರಕ್ಕೆ ಹರಿಪ್ರಸಾದ್ ನಂದಳಿಕೆ, ಚಿನ್ಮಯಿ ಮೋಹನ್ ಸಾಲಿಯಾನ್ ಮುಂಬಯಿ, ರಮಾನಂದ ಶೆಟ್ಟಿ ಒಮನ್, ಮಾಧ್ಯಮ ಪುರಸ್ಕಾರಕ್ಕೆ ಶಶಿ ಬಂಡಿಮಾ‌ರ್, ರೋನ್ಸ್ ಬಂಟ್ವಾಳ್ ಮುಂಬಯಿ ಆಯ್ಕೆಯಾಗಿದ್ದಾರೆ. ಸಂಘಟನಾ ಪುರಸ್ಕಾರಕ್ಕೆ ಜೈ ತುಳುನಾಡು, ತುಳುಕೂಟ ಫೌಂಡೇಶನ್ ನಾಲಸೋಪಾರ ಮುಂಬಯಿ, ತುಳುಕೂಟ ಕತಾರ್ ಆಯ್ಕೆಯಾಗಿವೆ.

ಗೌರವ ಪ್ರಶಸ್ತಿ 50 ಸಾವಿರ ರೂ., ಪ್ರಶಸ್ತಿ ಪತ್ರ, ಸ್ಮರಣಿಕೆ, ಪುಸ್ತಕ ಬಹುಮಾನ 25 ಸಾವಿರ ರೂ., ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. ವಿಶೇಷ ಪುರಸ್ಕಾರ 10 ಸಾವಿರ ರೂ., ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ ಎಂದರು.

ಅಕಾಡೆಮಿ ಸದಸ್ಯರಾದ ಲೀಲಾಕ್ಷ ಕರ್ಕೇರ, ಕಾಂತಿ ಶೆಟ್ಟಿ ಬೆಂಗಳೂರು, ನಾಗೇಶ್ ಕುಲಾಲ್ ಕುಳಾಯಿ, ರಿಜಿಸ್ಟ್ರಾರ್ ಕವಿತಾ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *