ಸುರತ್ಕಲ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಎಚ್ಚರಿಕೆ ಅಮಾಯಕ ಕಾರ್ಯಕರ್ತರಿಗೆ ಅನ್ಯಾಯವಾದರೆ ಸಿಡಿದೇಳುವೆ : ಡಾ. ಭರತ್ ಶೆಟ್ಟಿ
ಕೈಕಂಬ : ಸುರತ್ಕಲ್‌ನಲ್ಲಿ ನಡೆದ ಫಾಸಿಲ್ ಕೊಲೆ ಪ್ರಕರಣದ ತನಿಖೆ ನೆಪದಲ್ಲಿ ಅಮಾಯಕ ಕಾರ್ಯಕರ್ತರ ಮನೆಗೆ ನುಗ್ಗಿ ಬೆದರಿಸಿದರೆ ನಾನು ಸುಮ್ಮನಿರುವುದಿಲ್ಲ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ಕೊಲೆ ಮಾಡಿರುವ ಆರೋಪಿಗಳು ಬಳಸಿರುವ ವಾಹನ, ಸೀಸಿಟೀವಿ ಕ್ಯಾಮರಾ ದೃಶ್ಯಗಳು ನಿಮ್ಮ ಇಲಾಖೆಯಲ್ಲಿದ್ದರೂ, ನೈಜ ಆರೋಪಿಗಳ ಬಂಧಿಸುವುದನ್ನು ಬಿಟ್ಟು ತನಿಖೆಯ ನೆಪದಲ್ಲಿ ಅಮಾಯಕ ಕಾರ್ಯಕರ್ತರನ್ನು ಎಳೆದುಕೊಂಡು ಹೋಗಿ ಕಿರುಕುಳ ನೀಡುವ ಪ್ರಯತ್ನ ನಡೆಸಿದ್ದೀರಿ ಎಂಬ ದೂರುಗಳು ಬಂದಿವೆ. ಇಂತಹ ಘಟನೆ ಮುಂದುವರಿದಲ್ಲಿ ಮಂಗಳೂರು ಪೊಲೀಸ್ ಆಯುಕ್ತಾಲಯದ ಎದುರು ಪ್ರತಿಭಟನೆ ನಡೆಸುವೆ ಎಂದು ಶಾಸಕರು ಪೊಲೀಸ್ ಆಯುಕ್ತರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
“ನಿಮ್ಮ ಕೈಯಲ್ಲಿ ಸಾಕ್ಷ್ಯಾಧಾರಗಳಿವೆ. ಧೈರ್ಯದಿಂದ ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿ. ನೀವು ಮಾಡುವ ಅಂತಹ ಕಾನೂನಾತ್ಮಕ ಕಾರ್ಯಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಅದನ್ನು ಬಿಟ್ಟು, ಅಮಾಯಕರ ಮನೆಗೆ ನುಗ್ಗಿ ಅವರ ಕುಟುಂಬದಲ್ಲಿ ಭೀತಿ ಹುಟ್ಟಿವಂತಹ ಕೆಲಸ ಮಾಡಿದರೆ ನಾನು ಸುಮ್ಮನಿರುವುದಿಲ್ಲ. ಈಗಾಗಲೇ ಇಂತಹ ಘಟನೆಗಳು ನಡೆದಿರುವ ಬಗ್ಗೆ ನನಗೆ ದೂರುಗಳು ಬಂದಿವೆ. ಇದು ತಪ್ಪು. ನಿಮ್ಮ ಅನುಚಿತ ವರ್ತನೆ ಬಗ್ಗೆ ರಾಜ್ಯ ಗೃಹ ಸಚಿವರಿಗೆ ದೂರು ನೀಡುತ್ತೇನೆ” ಎಂದರು.
“ನಾನು ಯಾವತ್ತೂ ಪದವಿಗಾಗಿ ಅಂಟಿಕೊAಡವನಲ್ಲ. ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುವ ನಾನು, ಪಕ್ಷ ಕಾರ್ಯಕರ್ತರಿಗೆ ಅಥವಾ ಅಮಾಯಕ ಹಿಂದೂಗಳಿಗೆ ಅನ್ಯಾಯವಾದರೆ ಸಿಡಿದೇಳುವೆ. ಕೊಲೆಯಲ್ಲಿ ಭಾಗಿಯಾಗಿರುವ ನೈಜ ವ್ಯಕ್ತಿಗಳ ಬಂಧಿಸುವ ಕೆಲಸ ಮಾಡಿ, ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.