ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ
ಬೆಂಗಳೂರು: ಫುಟ್‌ಬಾಲ್ ಆಟದಲ್ಲಿ ಪಾದದ ಕಾರ್ಟಿಲೆಜ್‌ಗೆ ಹಾನಿಮಾಡಿಕೊಂಡಿದ್ದ ಕ್ರೀಡಾಪಟುವಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆಯನ್ನು ಜಯನಗರದ ಯುನೈಟೆಡ್ ಆಸ್ಪತ್ರೆಯ ವೈದ್ಯರು ನೆರವೇರಿಸಿದ್ದಾರೆ.
ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ನಡೆಸಿದ ಈ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ವೈದ್ಯರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಇತ್ತೀಚಿಗೆ ಫುಟ್‌ಬಾಲ್ ಆಟಗಾರ ಅಜಯ್ ಪಂದ್ಯವೊಂದರಲ್ಲಿ ತನ್ನ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಕೀಲುಗಳ ಕಾರ್ಟಿಲೆಜ್ ಸಮಸ್ಯೆಯನ್ನು ಸಾಮಾನ್ಯವಾಗಿ ಯಾವುದೇ ಶಸ್ತ್ರಚಿಕಿತ್ಸೆಗಳಿಲ್ಲದೆ ನಿವಾರಿಸಲಾಗುತ್ತದೆ. ದೀರ್ಘಕಾಲದ ವಿಶ್ರಾಂತಿ ತೆಗೆದುಕೊಳ್ಳುವುದು ಸಾಮಾನ್ಯವಾಗಿ ಭಾರತದಲ್ಲಿ ರೂಢಿಯಲ್ಲಿದೆ. ಆದರೆ ಇದು ಕ್ರೀಡಾಪಟುಗಳು ತಮ್ಮ ಚಟುವಟಿಕೆಗಳಲ್ಲಿ ಮುಂದುವರಿಯುವುದನ್ನು ತಡೆಯುತ್ತದೆ ಹಾಗೂ ನಿಧಾನವಾಗಿ ಚೇತರಿಸಿಕೊಳ್ಳುವ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಮರಳಿ ಪಡೆದುಕೊಳ್ಳಲು ಬಹಳಷ್ಟು ಸಮಯಾವಕಾಶ ಬೇಡುತ್ತದೆ ಎಂದರು.
ನೂತನ ವಿಧಾನದ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಿಸಿದ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪಿಡಿಶಿಯನ್ ಡಾ. ಪ್ರದ್ಯುಮ್ನ ಆರ್, ಅಥ್ಲೆಟಿಕ್‌ನಲ್ಲಿ ಪಾಲ್ಗೊಳ್ಳುವ ಮಂದಿಗೆ ಕೀಲಿನ ಕಾರ್ಟಿಲೆಜ್ ಗಾಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ವೃತ್ತಿಪರ ಕ್ರೀಡಾಪಟುಗಳು ಮತ್ತು ಕ್ರೀಡಾ ಹವ್ಯಾಸಿಗಳು ಕಾರ್ಟಿಲೆಜ್ ಹಾನಿಗೆ ಗುರಿಯಾಗುತ್ತಾರೆ. ಇದು ಟ್ವಿಸ್ಟ್ ಮಾಡುವಾಗ, ಜಂಪ್ ಮಾಡುವಾಗ ಜಿಗಿಯುವಾಗ ಮೊಣಕಾಲನ್ನು ತೀವ್ರವಾಗಿ ಬಾಗಿಸಿದಾಗ ಅಥವಾ ಹಠಾತ್ ಆಘಾತಕಾರಿ ಗಾಯದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಗುಣಪಡಿಸುವ ಸೀಮಿತ ಚಿಕಿತ್ಸೆಗಳಿಂದಾಗಿ, ನೋವು ಹೆಚ್ಚಾಗಿರುತ್ತದೆ. ಹೆಚ್ಚಿನ ಬಾರಿ ಇದು ಅಪೂರ್ಣ ಚಿಕಿತ್ಸೆಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಕಾರ್ಟಿಲೆಜ್ ಗಾಯಗಳು ಪ್ರೊಗ್ರೆಸ್ಸಿವ್ ಕೊಂಡ್ರೊಜೆನಿಕ್ ನಷ್ಟಕ್ಕೆ ಕಾರಣವಾಗಬಹುದು ಅಥವಾ ಕಾಲಕ್ರಮೇಣ ಕಾರ್ಟಿಲೆಜ್ ಕಳೆದುಹೋಗಬಹುದು ಎಂದು ಹೇಳಿದರು.
ಕೇವಲ ಕೀಹೋಲ್ ವಿಧಾನದ ಮೂಲಕ ರೋಗಿಗೆ ಒಂದೇ ಹಂತದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಜಯ್ ಈಗ ಗುಣಮುಖವಾಗುವುದರ ಜೊತೆಗೆ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಹಜ ಸ್ಥಿತಿಗೆ ಕ್ಷಿಪ್ರವಾಗಿ ಮರಳುತ್ತಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ನೆಚ್ಚಿನ ಕ್ರೀಡೆಯನ್ನು ಮತ್ತೆ ಆಡಲು ಸಾಧ್ಯವಾಗುತ್ತದೆ ಎಂದು ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪಿಡಿಶಿಯನ್ ಡಾ. ಪ್ರದ್ಯುಮ್ನ ಆರ್ ತಿಳಿಸಿದರು.