ಕಾಳಜಿ ಕೇಂದ್ರದಲ್ಲಿದ್ದ ಸಂತ್ರಸ್ತರಿಗೆ ಊಟ ಬಡಿಸಿದ ರೇಣುಕಾಚಾರ್ಯ
ದಾವಣಗೆರೆ: ಕೊರೊನಾ ಸಮಯದಲ್ಲೂ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಇದೀಗ ನೆರೆ ಸಂತ್ರಸ್ತರ ಸಹಾಯಕ್ಕೂ ಮುಂದಾಗಿದ್ದು, ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ.
ರಾಜ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಎಲ್ಲಾ ಜಲಾಯಶಗಳು ಅಪಾಯ ಮಟ್ಟ ಮಿರಿ ಹರಿಯುತ್ತಿದೆ. ಅಷ್ಟೇ ಅಲ್ಲದೇ ಅನೇಕ ಅನಾಹುತಗಳಾಗಿದ್ದು, ಅನೇಕರು ತಮ್ಮ ಸೂರನ್ನು ಕಳೆದುಕೊಂಡು ಕಾಳಜಿ ಕೇಂದ್ರದ ಮೊರೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯ ಅವರು ಸ್ವತಃ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿದ್ದ ಸಂತ್ರಸ್ತರಿಗೆ ಧೈರ್ಯ ನೀಡಿ, ಅವರೇ ಊಟ ಬಡಿಸಿದ್ದಾರೆ.
ಅಪಾಯ ಮಟ್ಟ ಮೀರಿ ತುಂಗಭದ್ರ ನದಿ ಹರಿಯುತ್ತಿರುವುದರಿಂದ ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್‍ನ 20 ಮನೆಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮವಾಗಿ 20 ಕುಟುಂಬದ 120 ಜನರು ಕಾಳಜಿ ಕೇಂದ್ರದಲ್ಲಿ ಆಸರೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಶಾಸಕ ರೇಣುಕಾಚಾರ್ಯ ಬಾಡೂಟ ವ್ಯವಸ್ಥೆ ಮಾಡಿ, ಅವರೇ ಊಟ ಬಡಿಸಿದ್ದಾರೆ. ಅಷ್ಟೇ ಅಲ್ಲದೇ ತುಂಗಭದ್ರಾ ನದಿ ತಟಕ್ಕೆ ಭೇಟಿ ನೀಡಿ, ನದಿಯ ನೀರಿನ ಮಟ್ಟವನ್ನು ಪರಿಶೀಲಿಸಿದರು.