ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ
ಲಂಡನ್: ಬ್ರಿಟನ್‌ನಲ್ಲಿ ಕಳೆದ 48 ಗಂಟೆಗಳಲ್ಲಿ 5 ಕ್ಯಾಬಿನೆಟ್ ಸಚಿವರು ಅಧಿಕಾರಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಹ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಂಗಳವಾರ ರಾತ್ರಿಯಿಂದಲೇ ಪ್ರಮುಖ ಸಚಿವರು ಸರ್ಕಾರವನ್ನು ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ತಿಂಗಳು, ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವರಾದ ರಿಷಿ ಸುನಕ್ ಮತ್ತು ಸಾಜಿದ್ ಜಾವಿದ್ ಕೂಡ ಜಾನ್ಸನ್ ತಂಡವನ್ನು ತೊರೆದಿದ್ದಾರೆ.
ಆರೋಗ್ಯ ಸಚಿವ ಸಾಜಿದ್ ಜಾವಿದ್ ಮತ್ತು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಕ್ ಅವರ ರಾಜೀನಾಮೆಯೊಂದಿಗೆ ಪ್ರಾರಂಭವಾದ ಸಂಚಲನ ನಿನ್ನೆಯೂ ಮುಂದುವರಿದಿತ್ತು. ಜಾನ್ ಗ್ಲೇನ್, ಭದ್ರತಾ ಕಾರ್ಯದರ್ಶಿ ರಾಚೆಲ್ ಮೆಕ್ಲೀನ್, ರಫ್ತು ಸಚಿವ ಮೈಕ್ ಫ್ರೀರ್, ವಸತಿ ಮತ್ತು ಸಮುದಾಯಗಳ ಜೂನಿಯರ್ ಸಚಿವ ನೀಲ್ ಒಬ್ರೇನ್, ಶಿಕ್ಷಣ ಇಲಾಖೆಯ ಕಿರಿಯ ಕಾರ್ಯದರ್ಶಿ ಅಲೆಕ್ಸ್ ಬರ್ಗರ್ಟ್ ಸೇರಿದಂತೆ 40ಕ್ಕೂ ಹೆಚ್ಚು ಸಚಿವರು ಜಾನ್ಸನ್ ಅವರ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ.