ಮಣಿಪುರದಲ್ಲಿ ಭೂಕುಸಿತ – 3 ದಿನಗಳಿಂದ 24 ಸಾವು, 38 ಜನ ನಾಪತ್ತೆ
ಇಂಫಾಲ: ಮಣಿಪುರದ ನೋನಿ ಜಿಲ್ಲೆಯ ಟೆರಿಟೋರಿಯಲ್ ಆರ್ಮಿ ಕ್ಯಾಂಪ್‌ನಲ್ಲಿ ಬುಧವಾರ ಭಾರೀ ಭೂಕುಸಿತ ಉಂಟಾಗಿ, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. 38 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಳೆದ 3 ದಿನಗಳಿಂದ ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್, ಟೆರಿಟೋರಿಯಲ್ ಆರ್ಮಿ, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇಲ್ಲಿಯವರೆಗೆ 13 ಸೇನಾ ಸಿಬ್ಬಂದಿ ಹಾಗೂ ಐವರು ನಾಗರಿಕರನ್ನು ರಕ್ಷಿಸಲಾಗಿದೆ ಎಂದು ಹೇಳಿವೆ. ಘಟನೆಯಲ್ಲಿ ಸಾವನ್ನಪ್ಪಿದ 24 ಜನರ ಪೈಕಿ 18 ಮಂದಿ ಹಾಗೂ ನಾಪತ್ತೆಯಾಗಿರುವ 38 ಜನರ ಪೈಕಿ 12 ಮಂದಿ ಸೇನಾ ಸಿಬ್ಬಂದಿಯೇ ಸೇರಿದ್ದಾರೆ ಎನ್ನಲಾಗಿದೆ.
ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಶುಕ್ರವಾರ ಸಂಜೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ 9 ಯೋಧರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.