ಬಂಟ್ವಾಳ: ಇಲ್ಲಿನ ಚಲನಚಿತ್ರದ ಇತಿಹಾಸದಲ್ಲೇ ಚಾಲಿಪೋಲಿಲು ವಿಶಿಷ್ಟ್ಯ ದಾಖಲೆಯನ್ನು ನಿರ್ಮಿಸಿದೆ. ಬಿಡುಗಡೆಯ ನಂತರದ ಪ್ರತಿ ದಿನವೂ ಥಿಯೇಟರ್ ಪ್ರೇಕ್ಷಕರಿಂದ ಹೌಸ್ಫುಲ್ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಟಿಕೇಟ್ ವಿತರಿಸುವ ಪರಿಸ್ಥಿತಿ ಎದುರಾಗಿದೆ ಎಂದು ಹಿರಿಯ ಹಾಸ್ಯ ಕಲಾವಿದ, ನಿರ್ದೇಶಕ ದೇವದಾಸ್ ಕಾಪಿಕ್ಕಾಡ್ ಹೇಳಿದರು.


ಅವರು ಬಿ.ಸಿ.ರೋಡಿನ ನಕ್ಷತ್ರ ಸಿನೆಮಾ ಮಂದಿರದಲ್ಲಿ ಭಾನುವಾರ ನಡೆದ ಚಾಲಿಪೋಲಿಲು ತುಳು ಚಲನಚಿತ್ರದ ಪ್ರಮುಖ ಕಲಾವಿದರಿಗೆ ಅಭಿನಂದನೆ ಹಾಗೂ ಪ್ರೇಕ್ಷಕರ ಲಕ್ಕಿ ಕೂಪನ್ ವಿಜೇತರಿಗೆ ಚಿನ್ನ ಮತ್ತು ಬೆಳ್ಳಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಟ್ವಾಳದಲ್ಲಿ ಈ ಹಿಂದೆ ಯಾವುದೇ ಚಲನ ಚಿತ್ರ ಇಷ್ಟೊಂದು ಅದ್ಧೂರಿಯಲ್ಲಿ ಜನಪ್ರಿಯತೆಯಲ್ಲಿ ಸಂಪಾದಿದ್ದನ್ನು ಕಂಡಿಲ್ಲ ಎಂದರು.
ತುಳು ಚಲನಚಿತ್ರವನ್ನು ಜನಸ್ನೇಹಿಗೊಳಿಸಲು ಹಾಗೂ ಜನ ಜೀವನಕ್ಕೆ ಇನ್ನಷ್ಟು ಹತ್ತಿರವಾಗಿ ಕೊಂಡೊಯ್ಯಲು `ಚಾಲಿಪೋಲಿಲು’ ಶ್ರಮಿಸಿದೆ. ಈ ಚಿಂತನೆ ಚಿತ್ರದ ಯಶಸ್ವಿಗೆ ಕಾರಣ ಎನ್ನಬಹುದು. ವಿನೂತನ ಪ್ರಯೋಗ ಹಾಗೂ ಪರಿಕಲ್ಪನೆಯನ್ನು ಯಶಸ್ವಿಗೊಳಿಸಲು ಶ್ರಮಿಸಿದ ತಂಡದ ಎಲ್ಲಾ ಕಲಾವಿದರ ನಟನೆ, ಸಹಭಾಗಿತ್ವ ಹಾಗೂ ಇರುವಿಕೆಯನ್ನು ಅವರು ಅಭಿನಂದಿಸಿದರು. ತುಳು ಭಾಷೆ ಉಳಿಸಲು ಹಾಗೂ ಬೆಳೆಸಲು ಜನರು ಕೊಟ್ಟ ಕೊಡುಗೆ ಎಂದರು.
ಪ್ರೇಕ್ಷಕರ ಲಕ್ಕಿ ಕೂಪನ್ ಡ್ರಾ ಮಾಡಲಾಯಿತು. ಬಂಟ್ವಾಳ ವಿಎನ್ಆರ್ ಗೋಲ್ಡ್ ಪ್ರಾಯೋಜಕತ್ವದಲ್ಲಿ ವಿಜೇತರ ಪ್ರೇಕ್ಷಕರಿಗೆ ಚಿನ್ನ, ಬೆಳ್ಳಿ ಬಹುಮಾನವನ್ನು ಪ್ರಕಟಿಸಲಾಯಿತು. ಕೂಪನ್ ನಂಬ್ರದ ಪ್ರೇಕ್ಷಕರು ಪ್ರಥಮ (9060), ದ್ವಿತೀಯ (4202), ತೃತೀಯ (4209) ಬಹುಮಾನ ಪಡೆದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಬಂಟ್ವಾಳ ಶಾಖಾ ನಿವೃತ್ತ ಮೇನೇಜರ್ ಪ್ರಭಾಕರ ವಿ.ಪೈ ಕಾರ್ಯಕ್ರಮ ನಿರೂಪಿಸಿದರು.
ತಂಡಕ್ಕೆ ಅಭಿನಂದನೆ: ಚಾಲಿಪೋಲಿಲು ಚಿತ್ರದ ತಂಡಕ್ಕೆ ಬಂಟ್ವಾಳದ ಪ್ರತಿಷ್ಠಿತ ಸ್ವರ್ಣೋದ್ಯಮಿ ಬಿ. ನಾಗೇಂದ್ರ ಬಾಳಿಗಾ ಅವರು ಅಭಿನಂದಿಸಿದರು. ನಿರ್ಮಾಪಕ ಪ್ರಕಾಶ್ ಕೆ.ಪಾಂಡೇಶ್ವರ್, ನಿರ್ದೇಶಕ ವಿರೇಂದ್ರ ಶೆಟ್ಟಿ ಕಾವೂರು, ಸಹ ನಿರ್ದೇಶಕ ಜಗನ್ನಾಥ ಶೆಟ್ಟಿ ಬಾಳ, ನಟರಾದ ದೇವದಾಸ್ ಕಾಪಿಕ್ಕಾಡ್, ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಸುರೇಂದ್ರ ಬಂಟ್ವಾಳ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.




