Published On: Wed, Jun 29th, 2022

ಬಂಟ್ವಾಳ ಪುರಸಭೆಗೆ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಬೀಗ ಜಡಿದ ಮಂಗಳೂರು ಶಾಸಕ ಯು.ಟಿ. ಖಾದರ್

ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದ ಗೇಟಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಬೀಗ ಜಡಿದಿದ್ದಾರೆ.

u t khader

ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಒಣಕಸ ಮಾತ್ರ ಹಾಕಬೇಕು ಎನ್ನುವ ಸೂಚನೆಯನ್ನು ತಿರಸ್ಕರಿಸಿ ಹಸಿ ತ್ಯಾಜ್ಯಗಳನ್ನು ಹಾಕಿದ್ದ ಪರಿಣಾಮ ತ್ಯಾಜ್ಯಗಳು ಮಳೆ ನೀರಿಗೆ ಕೊಳೆತು ದುರ್ನಾತ ಬೀರಿ ಪರಿಸರವನ್ನು ಕಲುಷಿತಗೊಳಿಸಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ತಪ್ಪಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸುವ ಎಚ್ಚರಿಕೆಯನ್ನು ಸಜೀಪನಡು ಗ್ರಾ.ಪಂ. ಮಾಜಿ ಅಧ್ಯಕ್ಷ ನಾಸೀರ್ ಅವರು ನೀಡಿದ್ದರು.

ಶಾಸಕ ಖಾದರ್ ಭೇಟಿ:
ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಮಂಗಳೂರು ಶಾಸಕ ಯು.ಟಿ.ಖಾದರ್ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬಂಟ್ವಾಳ ಪುರಸಭೆಯವರು ಬೇಕಾ ಬಿಟ್ಟಿ ತ್ಯಾಜ್ಯ ಸುರಿಯುತ್ತಿರುವ ಘಟನೆ ಕಣ್ಣಾರೆ ಕಂಡು ದುರ್ವಾಸನೆ ಹಾಗೂ ಅವ್ಯವಸ್ಥೆಯಿಂದ ಸ್ಥಳೀಯ ನಾಗರಿಕರ ಮೇಲಾಗುವ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶಾಸಕ ಯು.ಟಿ.ಖಾದರ್ ಘನತ್ಯಾಜ್ಯ ಘಟಕಕ್ಕೆ ಬೀಗ ಜಡಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳು, ಬಂಟ್ವಾಳ ಶಾಸಕರು, ಪುರಸಭೆ ಮುಖ್ಯಾಧಿಕಾರಿ,ಪುರಸಭೆ ಅಧ್ಯಕ್ಷರನ್ನೂ ಸಂಪರ್ಕಿಸಿದ ಶಾಸಕ ಯು.ಟಿ.ಖಾದರ್ ಘಟಕದ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆದಷ್ಟು ಬೇಗನೇ ಪರಿಹಾರ ಕಂಡುಕೊಳ್ಳುವಂತೆ ಸೂಚನೆ ನೀಡಿದರು.ಮುಂದಕ್ಕೆ ಯಾವುದೇ ಕಾರಣಕ್ಕೂ ಹಸಿ ಕಸ ತರಲು ಅನುಮತಿ ನೀಡಬಾರದೆಂದು ನಿರ್ಧರಿಸಿ ಇದನ್ನು ನೋಡಿಕೊಳ್ಳಲು ಸ್ಥಳೀಯರ ಕಾವಲು ಸಮಿತಿಯನ್ನು ಕೂಡಾ ನೇಮಿಸಲಾಯಿತು.

ಏನಿದು ಸಮಸ್ಯೆ?
ಬಂಟ್ಟಾಳ ಪುರಸಭೆಯ ಘನತ್ಯಾಜ್ಯ ಘಟಕಕ್ಕೆ ಬಂಟ್ವಾಳ ಹೊರ ವಲಯದ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ 2007ರಲ್ಲಿ ಸ್ಥಳ ನಿಗದಿಪಡಿಸಲಾಗಿತ್ತು.ಆದರೆ ಘಟಕ ನಿರ್ಮಾಣ ಮಾಡಲು ಸ್ಥಳೀಯರ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಸದನದಲ್ಲಿಯೂ ಚರ್ಚೆ ನಡೆದಿತ್ತು.

ಸ್ಪೀಕರ್ ಹಾಗೂ ಸಚಿವರು ಮದ್ಯೆ ಪ್ರವೇಶಿಸಿ ಜಿಲ್ಲಾಡಳಿತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.ಅದರಂತೆ ಅಂದಿನ ಜಿಲ್ಲಾಧಿಕಾರಿಗಳಾದ ಸಿಂದೂ ರೂಪೇಶ್ ರವರು ಶಾಸಕರೂ ಸೇರಿದಂತೆ ಸಹಾಯಕ ಕಮೀಷನರ್, ಮಂಗಳೂರು ತಹಶೀಲ್ದಾರ್, ಬಂಟ್ಟಾಳ ತಹಶೀಲ್ದಾರ್, ಬಂಟ್ಟಾಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಜೀಪ ನಡು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಕೇವಲ ಒಣಕಸ ಮಾತ್ರ ಹಾಕಲುನಿರ್ಧಾರಕ್ಕೆ ಬರಲಾಗಿತ್ತು.

ಬಳಿಕ ಕೆಲ ಸಮಯಗಳ ಕಾಲ ಕೇವಲ ಒಣಕಸ ಮಾತ್ರ ತಂದು ಅದನ್ನು ವಿಲೇವಾರಿ ಮಾಡುವ ಕೆಲಸ ಚಾಲ್ತಿಯಲ್ಲಿತ್ತು.ಆದರೆ ಕ್ರಮೇಣ ಹಸಿ ಕಸ ಕೂಡಾ ತರಲು ಪ್ರಾರಂಭಿಸಿ ಸತ್ತ ಪ್ರಾಣಿಗಳನ್ನು ಸಮೇತ ತಂದು ಸುರಿದು ಪಚ್ಟನಾಡಿ ತರಹ ಆಗಿ ಯಾರೂ ಕೇಳದ ಪರಿಸ್ಥಿತಿಗೆ ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಈ ಬಗ್ಗೆ ಸ್ಥಳೀಯ ನಾಗರೀಕರು ಮತ್ತೆ ಶಾಸಕ ಯು.ಟಿ.ಖಾದರ್ ರವರ ಬಳಿ ತಮ್ಮ ಅಹವಾಲು ತಿಳಿಸಿದಾಗ ಶಾಸಕರು ಇಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಘಟಕಕ್ಕೆ ಬೀಗ ಹಾಕಿದ್ದಾರೆ.

ಈ ಸಂದರ್ಭ ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಯಶವಂತ ದೇರಾಜೆ, ಅಬ್ದುಲ್ ರಝಕ್ ಕುಕ್ಕಾಜೆ, ಅಬೂಬಕ್ಕರ್ ಸಜಿಪ, ಶ್ರೀಮತಿ ತುಳಸಿ ಹನೀಫ್, ಮೋಹನ ಪೂಜಾರಿ, ಪ್ರತಾಪ್ ಕರ್ಕೇರ, ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter