ಬಂಟ್ವಾಳ: ೨೦೬೦ ಹಕ್ಕುಪತ್ರ, ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣೆಗೆ ಚಾಲನೆ ಕೋಮು ಸಂಘರ್ಷ ರಹಿತ ಆಡಳಿತ ಸಾಧನೆ: ಸಂಸದ ನಳಿನ್ ಕುಮಾರ್ ಕಟೀಲು
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಹಕ್ಕುಪತ್ರ ಮತ್ತು ಪ್ರಾಕೃತಿಕ ವಿಕೋಪ ಪರಿಹಾರಧನ ಚೆಕ್ ಹಾಗೂ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು.
ಪ್ರತೀ ಬಾರಿ ನಿಷೇಧಾಜ್ಞೆ ಮತ್ತು ಕರ್ಫ್ಯೂ ಘೋಷಣೆ ಸಹಿತ ಕೋಮು ಸಂಘರ್ಷ ನಡೆಯುತ್ತಿದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಮತ್ತು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶಾಂತಿ ಸಹಬಾಳ್ವೆ ಮತ್ತು ಅಭಿವೃದ್ಧಿಪರ್ವದ ಆಡಳಿತ ನಡೆಸಿರುವುದು ಇಲ್ಲಿನ ಶಾಸಕರು ಮತ್ತು ಬಿಜೆಪಿ ಪಕ್ಷದ ಸಾಧನೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಇಲ್ಲಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಹಕ್ಕುಪತ್ರ ಮತ್ತು ಪ್ರಾಕೃತಿಕ ವಿಕೋಪ ಪರಿಹಾರಧನ ಚೆಕ್ ಹಾಗೂ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಜೀವ ಗಾಂಧಿ ವಸತಿ ನಿಗಮ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಸವ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ೨೦೬೦ ಫಲಾನುಭವಿಗಳಿಗೆ ಕಾರ್ಯಾದೇಶ, ೯೪ಸಿ ಮತ್ತು ೯೪ ಸಿಸಿ ಹಕ್ಕು ಪತ್ರ, ಪಾಕೃತಿಕ ವಿಕೋಪದಡಿ ಪರಿಹಾರಧನ ಚೆಕ್, ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಿಸಲಾಯಿತು.
ರೂ ೫೫ ಕೋಟಿ ವೆಚ್ಚದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಯುಜಿಡಿ ಯೋಜನೆ ಅನುಷ್ಠಾನ, ರೂ ೧೦ ಕೋಟಿ ವೆಚ್ಚದಲ್ಲಿ ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಕೆ, ರೂ ಒಟ್ಟು ೨೪೦ ಧಾರ್ಮಿಕ ಕೇಂದ್ರಗಳ ರಸ್ತೆ ಸೇರಿದಂತೆ ರೂ ೧೬ ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ, ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆ, ಪ್ರತೀ ಮನೆಗೆ ಕುಡಿಯುವ ನಳ್ಳಿ ನೀರು ಪೂರೈಕೆಗೆ ಶಾಸಕರು ಶ್ರಮಿಸಿದ್ದಾರೆ ಎಂದರು.
ಕುಮ್ಕಿ ಹಕ್ಕಿನ ಸಮಸ್ಯೆ ನಿವಾರಣೆಯಾಗಲಿದ್ದು, ಬಿಸಿರೋಡು -ಅಡ್ಡಹೊಳೆ ಚತುಷ್ಪತ ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದೆ ಎಂದರು. ದೇಶದಲ್ಲಿ ಯುವಜನತೆಗೆ ‘ಅಗ್ನಿಪಥ್’ ಯೋಜನೆ ಜಾರಿ ಮತ್ತು ಸ್ವಚ್ಛ ಭಾರತ್ ಕಲ್ಪನೆಯಡಿ ೧೨ ಸಾವಿರ ಕೋಟಿ ಶೌಚಾಲಯ ಒದಗಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ಸಂಘರ್ಷದಿಂದ ಶಾಂತಿಯ ಕಡೆಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಅಡ್ಡಿಪಡಿವುವ ಯತ್ನ ವಿರೋಧಿಗಳಿಂದ ನಡೆಯುತ್ತಿದೆ. ಕೋವಿಡ್ ಸಂಕಷ್ಟದಿಂದ ೧೩೦ ಕೋಟಿ ಜನರ ಜೀವ ಉಳಿಸಲು ಲಸಿಕೆಗೆ ಆದ್ಯತೆ ನೀಡುವ ಮೂಲಕ ಪ್ರಧಾನಿ ಮೋದಿ ಶ್ರಮಿಸಿದ್ದಾರೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಜಿಲ್ಲಾ ನೊಡೆಲ್ ಅಧಿüಕಾರಿ ಸವಿತಾ, ತಾಲ್ಲೂಕು ಪಂಚಾಯಿತಿ ಇ.ಒ.ರಾಜಣ್ಣ, ಉಪತಹಶೀಲ್ದಾರ್ ನವೀನ್ ಬೆಂಜನಪದವು, ಕಲಾವಿದ ಮಂಜು ವಿಟ್ಲ ಇದ್ದರು.