ಬಂಟ್ವಾಳ: ವಿಮಾ ಪ್ರತಿನಿಧಿಗಳ ಸಮಾಲೋಚನಾ ಸಭೆ ಜು.೬ಮತ್ತು ೭ರಂದು ರಾಜ್ಯ ಮಟ್ಟದ ಸಮ್ಮೇಳನ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ವತಿಯಿಂದ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಸಂಘದ ವಿಭಾಗೀಯ ಅಧ್ಯಕ್ಷ ಲೋಕೇಶ ಶೆಟ್ಟಿ ಧರ್ಮಸ್ಥಳ ಮಾತನಾಡಿದರು.
ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ (ಲಿಕಾಯ್ )ಇದರ ವತಿಯಿಂದ ಇದೇ ೬ ಮತ್ತು ೭ ರಂದು ಬೆಳ್ತಂಗಡಿ ಸಂತೆಕಟ್ಟೆ ಎಸ್.ಡಿ.ಎಂ. ಸಭಾಂಗಣದಲ್ಲಿ ‘೬ನೇ ರಾಜ್ಯ ಮಟ್ಟದ ಸಮ್ಮೇಳನ’ ನಡೆಯಲಿದೆ ಎಂದು ಸಂಘದ ಉಡುಪಿ ವಿಭಾಗೀಯ ಅಧ್ಯಕ್ಷ ಲೋಕೇಶ ಶೆಟ್ಟಿ ಧರ್ಮಸ್ಥಳ ಹೇಳಿದ್ದಾರೆ.
ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಜು.02ರಂದು ಶನಿವಾರ ಸಂಜೆ ಏರ್ಪಡಿಸಿದ್ದ ವಿಮಾ ಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ೧೩ ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ನಡೆಯುವ ಸಮ್ಮೇಳನದಲ್ಲಿ ರಾಜ್ಯದ ೮ ವಿಭಾಗೀಯ ಮಟ್ಟದ ಅರ್ಹ ಪ್ರತಿನಿಧಿಗಳಿಗೆ ಗುರುತಿನ ಚೀಟಿ ವಿತರಣೆ ಸಹಿತ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ.
ಈ ಸಮ್ಮೇಳನದಲ್ಲಿ ಸಂಘದ ದಕ್ಷಿಣ ಮಧ್ಯ ವಲಯಾಧ್ಯಕ್ಷ ಎಲ್. ಮಂಜುನಾಥ್ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ವಿವಿಧ ಠರಾವು ಮಂಡನೆ ಮತ್ತು ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸುವುದರ ಜೊತೆಗೆ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಅವರು ತಿಳಿಸಿದರು. ಬಂಟ್ವಾಳ ಘಟಕ ಅಧ್ಯಕ್ಷ ಪ್ರಶಾಂತ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್.ಭಟ್, ಗೌರವಾಧ್ಯಕ್ಷ ಕೆ.ಕೇಶವ ಪ್ರಭು, ಪ್ರಧಾನ ಸಂಚಾಲಕ ಪ್ರಕಾಶ್ ಕುಮಾರ್ ಕೆ., ಪ್ರಮುಖರಾದ ವಿನ್ಸೆಂಟ್ ಡಿಸೋಜ, ಕರುಣಾಕರ ನಾಯಕ್, ಶಂಕರಲಿಂಗಂ, ನಾರಾಯಣ ಅಮೀನ್, ನವೀನ್ ಕೊಡ್ಮಾಣ್, ರಘುರಾಮ ಶೆಟ್ಟಿ, ಭವಾನಿ ನಾರಾಯಣ್, ಸುಮತಿ ಪ್ರಭು ಮತ್ತಿತರರು ಇದ್ದರು.