ಗುರುಪುರ : ಎನ್‌ಎಚ್ ೧೬೯ರ ತಿರುವುಗಳಲ್ಲಿ ಮೋರಿ, ರಸ್ತೆ ಕುಸಿತ ಭೀತಿ ಅಪಘಾತ ವಲಯದಲ್ಲಿ ತಡೆಗೋಡೆ ದುರಸ್ತಿಗೆ ಆಗ್ರಹ
ಕೈಕಂಬ : ಗುರುಪುರ ಜಂಕ್ಷನ್ ಮೂಲಕ ಮೂಡಬಿದ್ರಿಯತ್ತ ಸಾಗುವ ರಾಷ್ಟ್ರೀಯ ಹೆದ್ದಾರಿ ೧೬೯ರ ಅಣೆಬಳಿಯ ಮೂರು ಕಡಿದಾದ ತಿರುವುಗಳಲ್ಲಿ ಈಗಾಗಲೇ ಸಂಭವಿಸಿದ ಮೂರು ಘನ ವಾಹನ ಅಪಘಾತಗಳ ಸಂದರ್ಭದಲ್ಲಿ ರಸ್ತೆ ಬದಿಯ ತಡೆಗೋಡೆ ಕುಸಿದಿದ್ದು, ಮಳೆಗಾಲದಲ್ಲಿ ಆ ಪ್ರದೇಶದಲ್ಲಿ ತೀವ್ರ ಗುಡ್ಡ ಕುಸಿತ ಉಂಟಾಗಿದೆ. ಹೆದ್ದಾರಿಯ ಬೃಹತ್ ಮೋರಿಗಳು ಬಿರುಕು ಬಿಟ್ಟಿದ್ದು, ಇಳಿಜಾರಿನಲ್ಲಿ ಹೆದ್ದಾರಿ ಕುಸಿತಕ್ಕೊಳಗಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.
ಹೆದ್ದಾರಿಯ ಇಳಿಜಾರು ಪ್ರದೇಶದಲ್ಲಿರುವ ಮೂರು ಕಡಿದಾದ ತಿರುವಿನಲ್ಲಿ ಇತ್ತೀಚೆಗೆ ಮೂರು ಘನ ವಾಹನಗಳು ಉರುಳಿದ್ದರೆ, ತಿರುವಿನಲ್ಲಿ ಸಣ್ಣಪುಟ್ಟ ರಸ್ತೆ ಅಪಘಾತಗಳು ಸಾಮಾನ್ಯವಾಗಿ ಬಿಟ್ಟಿವೆ. ಇಲ್ಲಿ ದಾರಿದೀಪಗಳಿಲ್ಲ. ಒಂದೆರಡು ದೊಡ್ಡ ಮೋರಿಗಳ ಅಡಿಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಧಾರಾಕಾರ ಮಳೆಗೆ ರಸ್ತೆ ಪಕ್ಕದಲ್ಲಿ ಗುಡ್ಡದ ಮಣ್ಣು ಇನ್ನಷ್ಟು ಆಳಕ್ಕೆ ಕುಸಿಯಲಾರಂಭಿಸಿದೆ. ಪರಿಣಾಮವಾಗಿ ಇಲ್ಲೇ ಕೆಳ ಪ್ರದೇಶದಲ್ಲಿರುವ ಮನೆಗಳು ಅಪಾಯ ಎದುರಿಸುವಂತಾಗಿದೆ. ರಸ್ತೆಯ ಅಡಿಭಾಗದಲ್ಲಿ ಮಣ್ಣಿನ ಸವೆತ ಹೆಚ್ಚಾಗಿ ಹೆದ್ದಾರಿಯ ಕೆಲವೆಡೆ ಇಳಿಜಾರಂತಾಗಿ, ಸಣ್ಣ ಬಿರುಕು ಸೃಷ್ಟಿಯಾಗಿದೆ.
“ವರ್ಷದ ಹಿಂದೆ ಎನ್‌ಎಚ್ ಮಂಗಳೂರು ವಿಭಾಗವು ಈ ಪ್ರದೇಶವನ್ನು ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಿದ್ದರೂ, ಈವರೆಗೆ ದುರಸ್ತಿ ಕಾರ್ಯ ನಡೆಸಿಲ್ಲ. ಒಂದು ಕಡೆ ಹೆದ್ದಾರಿ ಪಕ್ಕದಲ್ಲಿ ಗುಡ್ಡ ಕುಸಿದು ಕೆಳಗಡೆ ಇರುವ ಬಾವಿಗೆ ಬಿದ್ದಿದೆ. ಇಂತಹ ಗಂಭೀರ ಸಮಸ್ಯೆ ಬಗ್ಗೆ ಸಂಬಂಧಿತ ಇಲಾಖೆಯ ಗಮನಕ್ಕೆ ತಂದರೆ ‘ಸೆಂಟ್ರಲ್ ಗರ‍್ನಮೆಂಟ್, ಗಜೆಟೆಡ್ ನೋಟಿಫಿಕೇಶನ್, ಹೊಸ ಹೆದ್ದಾರಿ(ವಿಸ್ತರಣೆ) ಅಲಾನ್‌ಮೆಂಟ್’ ಎಂದೆಲ್ಲ ಹೇಳುತ್ತಾರೆ. ಗುರುಪುರಕ್ಕೆ ಹತ್ತಿರವಿರುವ ಈ ಕಡಿದಾದ ತಿರುವಿಗಳಲ್ಲಿ ಇನ್ನಷ್ಟು ಅಪಘಾತಗಳು ಸಂಭವಿಸಿದರೆ ಯಾರು ಹೊಣೆ ? ಹೆದ್ದಾರಿ ತಡೆಗೋಡೆ ನಿರ್ಮಿಸಲಾಗದಷ್ಟು ಸಂರ್ಕೀಣವೇ ಈ ಸಮಸ್ಯೆ ? ಈ ಬಗ್ಗೆ ಸ್ಥಳೀಯ ಶಾಸಕರಿಗೂ ದೂರು ನೀಡಲಿದ್ದೇವೆ” ಎಂದು ಗುರುಪುರ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಸಚಿನ್ ಅಡಪ, ನಳಿನಿ ಶೆಟ್ಟಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎನ್‌ಎಚ್‌ನ ಮಂಗಳೂರು ವಿಭಾಗ ಹಾಗೂ ಪಿಡಬ್ಲ್ಯೂಡಿಗೆ ದೂರು ನೀಡಿದರೆ, ಎನ್‌ಎಚ್ ವಿಸ್ತರಣೆ ಕಾರಣ ಮುಂದಿಟ್ಟು ‘ಕೇಂದ್ರ ಆದೇಶ ಸಿಕ್ಕರೆ ದುರಸ್ತಿ ಸಾಧ್ಯ’ ಎನ್ನುವ ಉತ್ತರ ಸಿಗುತ್ತಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
“ಇಲ್ಲಿ ಹೆದ್ದಾರಿ ಸಹಿತ ರಸ್ತೆ ಮೋರಿ ಅಪಾಯದಂಚಿನಲ್ಲಿದ್ದು, ಮೇಲ್ಭಾಗ ಮತ್ತು ಕೆಳಭಾಗದ ಮನೆಗಳಿಗೆ ಸಂಚಕಾರ ತಂದಿದೆ. ಕೆಲವು ಸಮಯದ ಹಿಂದೆ, ಒಂದೆರಡು ಅಪಘಾತ ಸಂಭವಿಸಿದ ಬಳಿಕ ಇಲ್ಲಿ ಕಡಿದಾದ ತಿರುವೊಂದಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಸಲಾಗಿತ್ತು. ಈಗ ಪೊದೆಗಂಟಿಗಳಿಂದ ತುಂಬಿದ ಇಲ್ಲಿನ ಮೋರಿ ಸಹಿತ ರಸ್ತೆಯೇ ಕುಸಿಯುವ ಭೀತಿ ಎದುರಾಗಿದ್ದು, ವಾಹನ ಸವಾರರಿಗೆ ಅಪಾಯ ತಪ್ಪಿದ್ದಲ್ಲ. ಇನ್ನಷ್ಟು ಅಪಘಾತಗಳು ಸಂಭವಿಸಿದರೆ ದೇವರೇ ಗತಿ” ಎಂದು ಸ್ಥಳೀಯ ನಿವಾಸಿ, ಬಿಜೆಪಿ ಮುಖಂಡ ವಿನಯ್ ಸುವರ್ಣ ಗುರುಪುರ ಭೀತಿ ವ್ಯಕ್ತಪಡಿಸಿದ್ದಾರೆ.
“ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಲಾಗಿರುವ ಗುರುಪುರ ಜಂಕ್ಷನ್‌ನಿಂದ ಮೇಲ್ಭಾಗದ ರಾಷ್ಟೀಯ ಹೆದ್ದಾರಿಯ(೧೬೯) ತಿರುವು ಪ್ರದೇಶದಲ್ಲಿ ದುರಸ್ತಿ ಕೆಲಸಗಳು ನಡೆಯಬೇಕಿದೆ. ಮಳೆಗಾಲದಲ್ಲಿ ಅಲ್ಲಿ ಸಂಭವಿಸಬಹುದಾದ ರಸ್ತೆ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ಎನ್‌ಎಚ್ ಪ್ರಾಜೆಕ್ಟ್ ಮ್ಯಾನೇಜರ್ ಅವರಿಂದ ತಕ್ಷಣ ವರದಿ ಪಡೆದು, ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸಚಿವಾಲಯಕ್ಕೆ ವರದಿ ಕಳುಹಿಸಿ ಕೊಡುತ್ತೇವೆ” ಎಂದು ಎನ್‌ಎಚ್ ರಾಜ್ಯ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್(ಇಇ) ಗಣಪತಿ ನಾರಾಯಣ ಹೆಗ್ಡೆ ತಿಳಿಸಿದರು.