ಗಂಜಿಮಠದ ”ಶ್ರೀ ವಿಜಯ ವಾಹಿನಿ” ಸಂಸ್ಥೆಯ ೧೮ನೇ ವರ್ಷದ ಕಾರ್ಯಕ್ರಮ
ಕೈಕಂಬ : ಗಂಜಿಮಠದ ”ಶ್ರೀ ವಿಜಯ ವಾಹಿನಿ” ಸಂಸ್ಥೆಯು ಜೂ.26ರಂದು ಭಾನುವಾರ ಮೊಗರು ಗ್ರಾಮದ ಕುಕ್ಕಟ್ಟೆ ಸಭಾಭವನದಲ್ಲಿ ಆಯೋಜಿಸಿದ ತನ್ನ ೧೮ನೇ ವರ್ಷದ ಕಾರ್ಯಕ್ರಮದ ಪ್ರಯುಕ್ತ ಗಂಜಿಮಠ ಪಂಚಾಯತ್ ವ್ಯಾಪ್ತಿಯ ತೆಂಕುಳಿಪಾಡಿ, ಬಡಗುಳಿಪಾಡಿ, ಮೊಗರು ಗ್ರಾಮ ಹಾಗೂ ಸ್ಥಳೀಯ ಪ್ರದೇಶಗಳ ಶಾಲಾ-ಕಾಲೇಜುಗಳ ಸುಮಾರು ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪೆನ್, ಪೆನ್ಸಿಲ್, ಕಂಪಾಸ್ ಬಾಕ್ಸ್ನೊಂದಿಗೆ ಉಚಿತ ಬರೆಯುವ ಪುಸ್ತಕ ವಿತರಿಸಿತು. ಜೊತೆಗೆ ಏಳು ಮಂದಿ ಸಾಧಕರಿಗೆ ಸನ್ಮಾನ ಹಾಗೂ ೬೦ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ೫ ಕಿಲೋ ಅಕ್ಕಿ ವಿತರಿಸಿತು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಆರೋಗ್ಯಾಧಿಕಾರಿ ಎ ಕೃಷ್ಣ ರಾವ್ ನಾರ್ಲ ಮಾತನಾಡಿ, ಸಂಸ್ಥೆಯಿಂದ ಇಂತಹ ಸಮಾಜಮುಖಿ ಕಾರ್ಯಕ್ರಮ ನಿರಂತರ ನಡೆಯಲಿ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಅಭಿನಂದಾನರ್ಹ. ಸಂಸ್ಥೆಯಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಬೇಕು ಮತ್ತು ಸಂಸ್ಥೆಗೆ ಶಕ್ತಿ ನೀಡುವ ವ್ಯಕ್ತಿಗಳಾಗಬೇಕು ಎಂದರು.
ಗಂಜಿಮಠ ವ್ಯ.ಸೇ ಸ. ಸಂಘದ ಅಧ್ಯಕ್ಷ ಜಯಾನಂದ ನಾಯಕ್, ಗಂಜಿಮಠ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲತಿ ಪೂಜಾರಿ, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ಗಣೇಶ್ ಪೂಜಾರಿ ಮಾತನಾಡಿದರು. ಗಂಜಿಮಠ ಪಂಚಾಯತ್ ಉಪಾಧ್ಯಕ್ಷೆ ಕುಮುದಾ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರಿನ ಪೊಲೀಸ್ ಅಧಿಕಾರಿ ವಿಜಯ್ ಕಾಂಚನ್ ಬೈಕಂಪಾಡಿ, ರಾಜಕೀಯ ಮುಖಂಡ ಸೂರಲ್ಪಾಡಿ ಅಬ್ದುಲ್ ಮಜೀದ್, ನಿವೃತ್ತ ಶಿಕ್ಷಕಿ ವಾರಿಜಾ, ನಿವೃತ್ತ ಗ್ರಾಮ ಸಹಾಯಕ ಲೋಕಯ್ಯ ಕೊಟ್ಟಾರಿ, ಪಂಚಾಯತ್‌ನ ನಿವೃತ್ತ ಪಂಪ್ ಅಪರೇಟರ್‌ಗಳಾದ ಮುತ್ತಪ್ಪ ಪೂಜಾರಿ, ಮಹಮ್ಮದ್ ಯೂನೂಸ್, ಮಹಮ್ಮದ್ ಹನೀಫ್ ಹಾಗೂ ಮಳಲಿ ಕನ್ನಡ ಮಾಧ್ಯಮ ಶಾಲೆಯ ಎಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಕುಮಾರಿ ರಕ್ಷಾ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಕ್ಕುತ್ತರವಾಗಿ ಅಬ್ದುಲ್ ಮಜೀದ್ ಮಾತನಾಡಿ, ಶ್ರೀಮಂತಿಕೆ ಇದ್ದರೆ ಸಾಲದು, ಇದ್ದುದರಲ್ಲಿ ಸಮಾಜಕ್ಕೆ ಒಂದಷ್ಟು ಕೊಡುವ ಗುಣ ಬೆಳೆಸಿಕೊಳ್ಳಬೇಕು. ಎಲ್ಲರೂ ಒಗ್ಗೂಡಿ ಪ್ರೀತಿಯಿಂದ ಮಾಡುವ ಸೇವೆಯೇ ಸಮಾಜಸೇವೆ. ರಾಜಕೀಯೇತರ ಸಂಸ್ಥೆಯಾದ ‘ಶ್ರೀ ವಿಜಯವಾಹಿನಿ’ ಅದಕ್ಕೊಂದು ಉದಾಹರಣೆ ಎಂದರು.
ಸಂಸ್ಥೆಯ ಅಧ್ಯಕ್ಷ ಜಿ. ಸುನಿಲ್ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ದಯಾನಂದ ಪೂಜಾರಿ, ಸಂಸ್ಥೆಗೆ ನೆರವಾಗಿರುವ ಕುಲಶೇಖರದ ಕೊಡುಗೈ ದಾನಿ ಹ್ಯಾರಿಸ್ ರಸ್ಕಿನ್ಹಾರ ಪುತ್ರಿ ಇಂಡಿಯಾ ರಸ್ಕಿನ್ಹಾ ಹಾಗೂ ಅವರ ಪತಿ ಅಮೆರಿಕದ ಝೆಕಾರಿಯಾ, ಕಾಂಗ್ರೆಸ್ಸಿಗ ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟು, ರಮೇಶ್ ಸನಿಲ್, ಜನಾರ್ದನ ಕುಲಾಲ್, ಪದ್ಮನಾಭ ಬಲ್ಲಾಳ್, ಸಂಘದ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕಿಯರು, ಪೋಷಕರು, ಹಿತೈಷಿಗಳು ಉಪಸ್ಥಿತರಿದ್ದರು. ಶಿಕ್ಷಕ ಪ್ರವೀಣ್ ಕುಟಿನ್ಹೋ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.