ಓದಿನೊಂದಿಗೆ ವ್ಯಾಪಾರ-ಕುಟುಂಬಕ್ಕೆ ಆಧಾರ ಕೈಕಂಬದಲ್ಲಿ ಗ್ರಾಹಕರ ಗಮನಸೆಳೆದ ಕಾಲೇಜು ವಿದ್ಯಾರ್ಥಿ ನಿತೇಶ್‌ನ ‘ಸಾಯಿ’ ದೋಸಾ ಸ್ಟಾಲ್
ಕೈಕಂಬ : ಜೀವನ ಎಷ್ಟೇ ಕಠಿಣ ಹಾದಿಯಲ್ಲಿದ್ದರೂ ಸಾಧಿಸುವ ಛಲವೊಂದಿದ್ದರೆ ಗೆಲುವಿನ ಬೆಳಕು ನಿಶ್ಚಿತ ಎಂಬ ಆಶಾವಾದದೊಂದಿಗೆ ಜೀವನ ಸಾಗಿಸುತ್ತಿದೆ ಕುಪ್ಪೆಪದವಿನ ಒಂದು ಬಡ ಕುಟುಂಬ!
ಕುಪ್ಪೆಪದವಿನ ದೇವಿನಗರದ ಕುಟಿನ್ಹೋ ಕಂಪೌಂಡಿನಲ್ಲಿ ಬಾಡಿಗೆ ಮನೆಯಲ್ಲಿ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಜಯ ಎಸ್ ಪೂಜಾರಿ ಮತ್ತು ಚೇತನಾ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಮೂಡಬಿದ್ರೆಯ ಬನ್ನಡ್ಕ ವಿಶ್ವವಿದ್ಯಾಲಯ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ, ಪುತ್ರಿ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈಕೆ ವೈಟ್‌ಲಿಫ್ಟರ್ ಆಗಿದ್ದಾಳೆ. ಹಿಂದೆ ಪುಣೆಯಲ್ಲಿದ್ದ ಪೂಜಾರಿಯವರ ಕುಟುಂಬ ಕೊರೊನಾ ಬಾಧಿಸಿದ ಬಳಿಕ ಕುಪ್ಪೆಪದವಿಗೆ ಬಂದಿದೆ.
ಕೊರೋನಾದಿಂದ ಸಾವಿನಂಚಿಗೆ ಹೋಗಿದ್ದ ಜಯ ಅವರು ಈಗ ರೋಗ ಬಾಧೆಯಿಂದ ಎರಡೂ ಕಾಲಿನ ಸ್ವಾಸ್ಥ್ಯ ಕಳೆದುಕೊಂಡು ಮನೆಯಲ್ಲಿದ್ದರೆ, ಮಗ ನಿತೇಶ್ ಪೂಜಾರಿ ಕುಟುಂಬಕ್ಕೆ ಆಸರೆಯಾಗಿದ್ದಾನೆ. ಈತ ಗುರುಪುರ ಕೈಕಂಬದ ಗಣೇಶ ಕಟ್ಟೆಯ ಬಳಿ ದೋಸೆ ಮಾರಾಟದ ಪುಟ್ಟ ಸ್ಟಾಲೊಂದು ಹಾಕಿಕೊಂಡಿದ್ದಾನೆ. ಕಳೆದ ಆರು ತಿಂಗಳಿಂದ ಸಂಜೆ ೪ರಿಂದ ರಾತ್ರಿ ೯ರವರೆಗೆ ದೋಸೆ ಮಾರಾಟ ಮಾಡುತ್ತಿರುವ ಈತನಿಗೆ ಮನೆಯಲ್ಲಿ ತಂದೆ ಹಾಗೂ ಸ್ಟಾಲ್‌ನಲ್ಲಿ ತಾಯಿ ಚೇತನಾ ಜೊತೆಗಿದ್ದು ಸಹಕರಿಸುತ್ತಿದ್ದಾರೆ.
ಕಾಲೇಜು ಮುಗಿದ ಬಳಿಕ ಮನೆಗೆ ಆಗಮಿಸುವ ಈತ, ಅದಾಗಲೇ ತಾಯಿ ಮತ್ತು ತಂದೆ ಸಿದ್ಧಪಡಿಸಿದ ಖಾದ್ಯ ವಸ್ತುಗಳ ಮೂಟೆಯೊಂದಿಗೆ(ತಾಯಿ ಜೊತೆ) ಸ್ಕೂಟರ್‌ನಲ್ಲಿ ಕೈಕಂಬ ಪೇಟೆಗೆ ಬಂದು ವ್ಯಾಪಾರ ನಡೆಸುತ್ತಾನೆ. ಈತನ `ಸಾಯಿ’ ಸ್ಟಾಲ್‌ನಲ್ಲಿ ಅಗ್ಗದ ಬೆಲೆಗೆ ಸ್ವಾದಿಷ್ಟಕರ ಮಸಾಲ ದೋಸಾ(೨೦ ರೂ), ಈರುಳ್ಳಿ ಉತ್ತಪ್ಪ(೩೦ ರೂ), ಸೆಟ್ ದೋಸೆ(೩೦ ರೂ) ಮತ್ತು ಲೋನಿ ಸ್ಪಂಜ್ ದೋಸೆ(೩೦ ರೂ) ಲಭ್ಯವಿದೆ. ಸಂಜೆಯಾಗುತ್ತಲೇ ದಿನಗೂಲಿ ಕಾರ್ಮಿಕರು, ಕಚೇರಿ ಮತ್ತು ಮನೆಯವರು ಈತನ ದೋಸೆ ರುಚಿ ಸವಿಯಲು ಸಾಲಾಗಿ ನಿಲ್ಲುತ್ತಾರೆ ; ಮನೆಗೆ ಪಾರ್ಸೆಲ್ ಕೊಂಡೊಯ್ಯುತ್ತಾರೆ.
”ಮಳೆ ಇಲ್ಲದಿದ್ದರೆ ಸುಮಾರು ೧,೫೦೦ ರೂ.ವರೆಗೆ ವ್ಯಾಪಾರವಾಗುತ್ತದೆ. ಕೆಲವು ದಿನ ವ್ಯಾಪಾರ ಕಡಿಮೆ ಇರುತ್ತದೆ. ನಾನು ರಾತ್ರಿ ವೇಳೆ ಮನೆಯಲ್ಲಿ ಓದುತ್ತೇನೆ. ಎಷ್ಟೇ ಕಷ್ಟವಾದರೂ, ಮುಂದೆ ಉತ್ತಮ ದಿನಗಳು ಬರಬಹುದೆಂದು ನಾನು ನಂಬಿದ್ದೇನೆ. ತಂದೆ-ತಾಯಿ ಮತ್ತು ಸಹೋದರಿಯ ಸಹಕಾರ ನನಗಿದೆ” ಎಂದು ನಿತೇಶ್ ಪೂಜಾರಿ ಹೇಳುತ್ತಾನೆ.
”ಮಗ ಓದು ಮತ್ತು ವ್ಯಾಪಾರದ ಜೊತೆಗೆ ಅತ್ಯಂತ ಸಂತೋಷದಿಂದ ದೋಸಾ ಸ್ಟಾಲ್ ನಡೆಸುತ್ತಾನೆ. ವ್ಯಾಪಾರದಿಂದ ಬಂದ ಹಣ ಕುಟುಂಬಕ್ಕೆ ಸಾಕಾಗುತ್ತದೆ. ಕಾಲೇಜಿಗೆ ಹೋಗುವವರು ಇಂತಹ ಸ್ಟಾಲ್ ನಡೆಸುವುದಾ ಎಂಬ ಭಾವನೆ ಅವನಲ್ಲಿಲ್ಲ. ಹಿಂದೆ ಪುಣೆಯಲ್ಲಿ ಆತನ ತಂದೆಯವರೂ ದೋಸಾ ಸ್ಟಾಲ್ ಹೊಂದಿದ್ದರು. ಜೀವನ ನಡೆಯುತ್ತದೆ. ಕಷ್ಟವಾದರೂ ಓದುವ ಮಗನ ಉತ್ಸಾಹ ನಮಗೆ ಸ್ಪೂರ್ತಿ” ಎಂದು ತಾಯಿ ಚೇತನಾ ಪೂಜಾರಿ ಹೇಳುತ್ತಾರೆ.