ಸಾಧನೆಗೆ ವಿಕಲಚೇತನ ಶಾಪವಲ್ಲ! ಯಕ್ಷರಂಗದಲ್ಲಿ ಮಿಂಚುತ್ತಿರುವ ಕೃತಕ ಕಾಲಿನ ಕಲಾವಿದ ಮನೋಜ್
ಕೈಕಂಬ : ಸಾಧಿಸುವ ಉತ್ಕಟ ಛಲವೊಂದಿದ್ದರೆ, ವ್ಯಕ್ತಿಯ ಅಂಗವೈಕಲ್ಯ ಶಾಪವಾಗದು. ಈ ಮಾತಿಗೆ ಅಪವಾದವೆಂಬಂತೆ ಯಕ್ಷಗಾನ ಕ್ಷೇತ್ರದಲ್ಲಿ ಬೆಳ್ತಂಗಡಿ ತಾಲೂಕಿನ ವೇಣೂರು ಕರಿಮಣೇಲು ಗ್ರಾಮದ ಶೀನ ಮತ್ತು ಮಲ್ಲಿಕಾ ದಂಪತಿಯ ಪುತ್ರ, ವಿಕಲಚೇತನನಾದ ಮನೋಜ್(೧೯) ಹೆಸರು ಮಾಡುತ್ತಿದ್ದಾರೆ.
ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಬೇಕಿದ್ದರೆ, ಕಲಾವಿದನ ಸರ್ವಾಂಗವೂ ಸರಿಯಾಗಿರಬೇಕು. ದಿವ್ಯಾಂಗನಾಗಿರುವ ಮನೋಜ್ ತನ್ನ ಎಡಕಾಲು ಕಳೆದುಕೊಂಡಿದ್ದರೂ, ಕಲಾವಿದನಾಗಿ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಯಕ್ಷ ರಂಗದಲ್ಲಿ ಛಲದಂಕ ಮಲ್ಲನಂತೆ ಸೈ ಎನಿಸಿದ್ದಾರೆ.
ಬಾಲ್ಯದ ದಿನಗಳಲ್ಲಿ ಮನೋಜ್ ಬೆನ್ನಿನಲ್ಲಿ ಕಾಣಿಸಿಕೊಂಡ ಗುಳ್ಳೆ ತೆಗೆಯಲು ಶಸ್ತ್ರಚಿಕಿತ್ಸೆ ಮಾಡಿಸಿದರು. ಬಳಿಕ ಎಡಗಾಲಿನಲ್ಲಿ ಕಾಣಿಸಿಕೊಂಡ ಸಮಸ್ಯೆಗೆ ಕಾಲನ್ನೇ ಕತ್ತರಿಸಬೇಕಾಯಿತು. ಆಗ ಅವರು ೬ನೇ ತರಗತಿಯಲ್ಲಿದ್ದರು. ಅಲ್ಲಿಂದ ಇಲ್ಲಿಯವರೆಗೂ ಕೃತಕ ಕಾಲಿನ ಜೋಡಣೆಯೊಂದಿಗೆ ಓದು ಮುಂದುವರಿಸಿರುವ ಮನೋಜ್, ಕ್ರಮವಾಗಿ ಅಲಿಯೂರು ಮತ್ತು ವೇಣೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿದ್ದಾರೆ. ಪ್ರಸಕ್ತ ವೇಣೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದ್ದಾರೆ.
ಯಕ್ಷ ಚಟುವಟಿಕೆ : ೮ನೇ ತರಗತಿಯಲ್ಲಿರುವಾಗ ಶಾಲಾ ಮುಖ್ಯ ಶಿಕ್ಷಕ ವೆಂಕಟೇಶ್ ಎಸ್ ತುಳುಪುಳೆ ಅವರಿಂದ ಯಕ್ಷಗಾನದ ಪ್ರಾಥಮಿಕ ನಾಟ್ಯಕಲೆ ಅಭ್ಯಾಸ ಮಾಡಿದ್ದಾರೆ. ಗಿರಿಜಾ ಕಲ್ಯಾಣ ಪ್ರಸಂಗದ ಬೈರಾಗಿ ಪಾತ್ರದಲ್ಲಿ ಪ್ರಥಮ ಬಾರಿಗೆ ರಂಗ ಪ್ರವೇಶಿಸಿರುವ ಇವರು, ಮುಂದೆ ಮೂಡಬಿದ್ರೆಯ ಯಕ್ಷನಿಧಿಯಲ್ಲಿ ಶಿವಕುಮಾರ್ ಅವರಿಂದ ಹೆಚ್ಚಿನ ನಾಟ್ಯಾಭ್ಯಾಸ ಮಾಡಿಕೊಂಡರು. ಇದೇ ವೇಳೆ ಕರುಣಾಕರ ಶೆಟ್ಟಿ ಮತ್ತು ರಮೇಶ್ ಕುಲಶೇಖರ ಅವರು ಸುಂಕದಕಟ್ಟೆ ಮೇಳದಲ್ಲಿ ಹವ್ಯಾಸಿ ಕಲಾವಿದನಾಗಿ ಅವಕಾಶ ನೀಡಿದರು. ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿರುವ ಮನೋಜ್, ಬಪ್ಪನಾಡು ಮತ್ತು ಮಂಗಳಾದೇವಿ ಮೇಳದಲ್ಲಿ ಯಕ್ಷ ಸೇವೆ ಮುಂದುವರಿಸಿದ್ದಾರೆ. ದೇವೇಂದ್ರ, ಬಲರಾಮ, ಧೂಮ್ರಾಕ್ಷ, ಕಮಲಭೂಪ ಮೊದಲಾದ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಸಂಘ-ಸಂಸ್ಥೆಗಳು ನಡೆಸುವ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ.
“ನನ್ನ ಯಕ್ಷ ಕಲಾಸಕ್ತಿಗೆ ಹಿರಿಕಿರಿಯ ಕಲಾವಿದರು ಪ್ರೋತ್ಸಾಹ ನೀಡಿದ್ದಾರೆ. ಈ ಸಾಲಿನಲ್ಲಿ ರಮೇಶ್ ಕುಲಶೇಖರ ಅವರ ಸಹಕಾರ ಮತ್ತು ಬಣ್ಣಗಾರಿಕೆಯಲ್ಲಿ ಮಧುರಾಜ್ ಪೆರ್ಮುದೆ ಪ್ರೋತ್ಸಾಹ ನೆನಪಿನಲ್ಲಿ ಉಳಿಯುತ್ತದೆ” ಎಂದು ಮನೋಜ್ ಹೇಳಿದರು.