ಬಂಟ್ವಾಳ ಪುರಸಭೆ: ಸಾಮಾನ್ಯ ಸಭೆ ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ನಿರ್ಣಯ
ಬಂಟ್ವಾಳ: ಪುರಸಭೆಯಲ್ಲಿ ಜೂ.27ರಂದು ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಮಾತನಾಡಿದರು. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಇದ್ದಾರೆ.
ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಅನುಷ್ಠಾನಗೊಂಡ ಮೊದಲ ಹಂತದ ಸಮಗ್ರ ಒಳಚರಂಡಿ ಯೋಜನೆ ಕಾಮಗಾರಿ ಅಪೂರ್ಣಗೊಂಡಿರುವ ನಡುವೆಯೇ ರೂ ೫೬.೫೦ ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗೆ ಮಂಜೂರಾತಿ ನೀಡುವ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಪ್ರತ್ಯೇಕ ಸಮಾಲೋಚನಾ ಸಭೆ ನಡೆಸಲು ಪುರಸಭೆ ನಿರ್ಣಯ ಕೈಗೊಂಡಿದೆ.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಒಳಚರಂಡಿ ಮಂಡಳಿ ಎಂಜಿನಿಯರ್ ಶೋಭಾಲಕ್ಷ್ಮೀ, ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಪ್ರಸನ್ನ ಕುಮಾರ್ ಉಪಸ್ಥಿತಿಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ನಿರ್ಣಯ ಕೈಗೊಂಡರು.
ಕಳೆದ ೧೨ ವರ್ಷಗಳಿಂದ ಪ್ರಥಮ ಹಂತದ ಕಾಮಗಾರಿಯೇ ಪೂರ್ಣಗೊಂಡಿಲ್ಲ ಎಂದು ಸದಸ್ಯ ಆಡಳಿತ ಪಕ್ಷ (ಕಾಂಗ್ರೆಸ್) ಸಿದ್ದಿಕ್ ಟೀಕಿಸಿದರು. ಪ್ರಶ್ನಿಸಿದರು. ಪುರಸಭಾ ವ್ಯಾಪ್ತಿಯ ಬಂಟ್ವಾಳ, ಪಾಣೆಮಂಗಳೂರು ಮತ್ತು ಬಿ.ಸಿ.ರೋಡಿನ ಕೆಲವೆಡೆ ತ್ಯಾಜ್ಯ ನೀರು ನೇತ್ರಾವತಿ ನದಿ ಸೇರುತ್ತಿದ್ದು, ಇದಕ್ಕೆ ವೆಟ್ ವೆಲ್ ನಿರ್ಮಿಸಬೇಕು ಎಂದು ವಿರೋಧ ಪಕ್ಷ (ಬಿಜೆಪಿ) ಸದಸ್ಯ ಎ.ಗೋವಿಂದ ಪ್ರಭು ಆಗ್ರಹಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಶುಚಿಗೊಳಿಸದೆ ಕೆಲವೆಡೆ ಕೆಸರು ನೀರು ಕುಡಿಯುವಂತಾಗಿದೆ. ಸಿಸಿ ಕ್ಯಾಮೆರಾ ಅಳವಡಿಸಿದರೂ ರಸ್ತೆ ಬದಿ ತ್ಯಾಜ್ಯ ರಾಶಿ ತುಂಬಿದೆ. ರಸ್ತೆ ಬದಿ ಬೀದಿ ವ್ಯಾಪಾರ ಮತ್ತು ಮೀನು ವ್ಯಾಪಾರ ಅಡ್ಡಿಯಾಗಿದೆ. ಕೆಲವೆಡೆ ಒಳ ಚರಂಡಿ ಬಾಯ್ತೆರೆದುಕೊಂಡಿದ್ದು, ಹೂಳೆತ್ತದೆ ಪೊದೆ ಬೆಳೆದು ಸಾಂಕ್ರಾಮಿಕ ರೋಗ ಭೀತಿಗೆ ಕಾರಣವಾಗಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಸದಸ್ಯರಾದ ವಾಸು ಪೂಜಾರಿ, ಗಂಗಾಧರ ಪೂಜಾರಿ, ಜನಾರ್ಧನ ಚೆಂಡ್ತಿಮಾರ್, ಪಿ.ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಲುಕ್ಮಾನ್ ಬಂಟ್ವಾಳ, ಇದ್ರೀಶ್, ಲೋಲಾಕ್ಷ ಶೆಟ್ಟಿ, ಮೀನಾಕ್ಷಿ, ದೇವಕಿ, ಶಶಿಕಲಾ, ವಿದ್ಯಾವತಿ ಪ್ರಮೋದ್ ಕುಮಾರ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಅಧಿಕಾರಿ ಲೀಲಾವತಿ, ಮೀನಾಕ್ಷಿ, ಉಮಾವತಿ ಮತ್ತಿತರರು ಇದ್ದರು.