ಅಮೇರಿಕಾದ ಹ್ಯೂಸ್ಟನ್ ಶ್ರೀಕೃಷ್ಣ ವೃಂದಾವನಕ್ಕೆ ಬಂಟ್ವಾಳದಲ್ಲಿ ಸಿದ್ಧಗೊಳ್ಳುತ್ತಿದೆ ‘ಫೈಬರ್ ಕಡೆಗೋಲು ಕೃಷ್ಣ’
ಬಂಟ್ವಾಳ: ತಾಲ್ಲೂಕಿನ ಸಜಿಪಮೂಡ ಗ್ರಾಮದ ಕಂದೂರು ಸತ್ಯಶ್ರೀ ಕಲಾ ಬಳಗ ಕೇಂದ್ರಕ್ಕೆ ಅಮೇರಿಕಾದ ಶ್ರೀಕೃಷ್ಣ ವೃಂದಾವನ ಸಹಾಯಕ ಅರ್ಚಕ ಬಾಲಕೃಷ್ಣ ಭಟ್ ಹೆಜಮಾಡಿ ಇವರು ಸೋಮವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಲಾವಿದ ಕೇಶವ ಸುವರ್ಣ, ಸಂಘಟಕ ಸುಹಾಸ್ ಭಟ್ ಇದ್ದಾರೆ.
ಅಮೇರಿಕಾ ದೇಶದಲ್ಲಿ ಟೆಕ್ಸಾಸ್ ನ ಹ್ಯೂಸ್ಟನ್ ನಗರದಲ್ಲಿ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಿರ್ಮಾಣಗೊಂಡ ‘ಶ್ರೀಕೃಷ್ಣ ವೃಂದಾವನ’ಕ್ಕೆ ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ಕಂದೂರು ಸತ್ಯಶ್ರೀ ಕಲಾ ಬಳಗ ತಂಡದಿಂದ ಫೈಬರ್ ಮೋಲ್ಡ್ ‘ಕಡೆಗೋಲು ಶ್ರೀಕೃಷ್ಣ’ ವಿಗ್ರಹ ಸಿದ್ಧಗೊಳ್ಳುತ್ತಿದೆ. ಕಳೆದ ೩೦ ವರ್ಷಗಳಿಂದ ಸತ್ಯಶ್ರೀ ಕಲಾ ಬಳಗ ಮುನ್ನಡೆಸುತ್ತಿರುವ ಇಲ್ಲಿನ ಪ್ರಬುದ್ಧ ಕಲಾವಿದ ಕೇಶವ ಸುವರ್ಣ ಇವರಿಂದ ಅತ್ಯಾಕರ್ಷಕ ಫೈಬರ್ ವಿಗ್ರ‍್ರಹ ಮತ್ತು ಕಲಾಕೃತಿ ಸಿದ್ಧಗೊಳ್ಳುತ್ತಿದೆ. ಉಡುಪಿ ರಥಗೋಪುರ, ಅಷ್ಟಭುಜ ದುರ್ಗೆ, ಮಹಿಷಾಸುರ, ಚಂಡ-ಮುಂಡರು ಸೇರಿದಂತೆ ಮೆರವಣಿಗೆ ಬಿರುದಾವಳಿ ಮತ್ತು ತಟ್ಟೆರಾಯ ಸಿದ್ಧಗೊಳ್ಳುತ್ತಿದೆ.
ಅಮೇರಿಕಾ ಹ್ಯೂಸ್ಟನ್ ವೃಂದಾವನದಲ್ಲಿ ಚೌತಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ದಸರಾ, ದೀಪಾವಳಿ ಆಚರಣೆ ನಡೆಯುತ್ತಿದೆ. ಕಳೆದ ೪ ವರ್ಷಗಳ ಹಿಂದೆ ಗಣಪತಿ ವಿಗ್ರಹ ರಚಿಸಲು ಫೈಬರ್ ಮೋಲ್ಡ್ ತಯಾರಿಸಿ ಕೊಟ್ಟಿದ್ದರು. ಇದೀಗ ಪುತ್ತಿಗೆ ಸ್ವಾಮೀಜಿ ಮತ್ತು ಅಲ್ಲಿನ ಪ್ರಧಾನ ಅರ್ಚಕ ರಘುರಾಮ ಭಟ್ ಬೆಳ್ಳಾರೆ ಸಲಹೆಯಂತೆ ಕಡೆಗೋಲು ಶ್ರೀಕೃಷ್ಣನ ಫೈಬರ್ ಮೋಲ್ಡ್ ವಿಗ್ರಹ ಮತ್ತಿತರ ಕಲಾಕೃತಿ ರಚಿಸಲು ಸೂಚಿಸಿದ್ದಾರೆ. ಮುಂದಿನ ೧೫ ದಿನಗಳೊಳಗೆ ಬೆಂಗಳೂರು ಮಾರ್ಗವಾಗಿ ತಮಿಳ್ನಾಡು ಬಂದರಿಗೆ ಕಲಾಕೃತಿಗಳನ್ನು ಸಾಗಿಸಿ ಅಲ್ಲಿಂದ ಹಡಗಿನ ಮೂಲಕ ಅಮೇರಿಕಾಕ್ಕೆ ಕೊಂಡೊಯ್ಯುಲಾಗುವುದು ಎಂದು ಕಲಾಕೃತಿ ವೀಕ್ಷಿಸಲು ಸೋಮವಾರ ಸಂಜೆ ಭೇಟಿ ನೀಡಿದ ವೃಂದಾವನ ಸಹಾಯಕ ಅರ್ಚಕ ಬಾಲಕೃಷ್ಣ ಭಟ್ ಹೆಜಮಾಡಿ ಮತ್ತು ಸಂಘಟಕ ಸುಹಾಸ್ ಐತಾಳ್ ಸುದ್ದಿಗಾರರಿಗೆ ತಿಳಿಸಿದರು.
ಕಲಾವಿದ ಕೇಶವ ಸುವರ್ಣರು ಈಗಾಗಲೇ ಸಾಲುಮರದ ತಿಮ್ಮಕ್ಕ ಗಾರ್ಡನ್ ನಲ್ಲಿ ವಿವಿಧ ಕಲಾಕೃತಿ ರಚನೆ ಸೇರಿದಂತೆ ೨೩ ಚಲನಚಿತ್ರಗಳಿಗೆ ಕಲಾ ನಿರ್ದೇಶನ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ. ಸಾವಿರಕ್ಕೂ ಮಿಕ್ಕಿ ಟ್ಯಾಬ್ಲೋ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ನೂರಾರು ಮಂದಿ ಕಲಾಸಕ್ತರಿಗೆ ತರಬೇತಿ ನೀಡುತ್ತಿರುವುದಾಗಿ ಪ್ರತಿಕ್ರಿಯಿಸಿದರು.