ಜೂನ್ 24 ರಂದು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಐಸಿಯು ಘಟಕ ಲೋಕಾರ್ಪಣೆ
ಬಂಟ್ವಾಳ: ಜೂ. ೨೪ರಂದು ಶುಕ್ರವಾರ ಗುಣಮಟ್ಟದ ಆರೋಗ್ಯ ಸೇವೆಯ ದೃಷ್ಟಿಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸುಮಾರು ೧.೬೭ ಕೋ.ರೂ.ವೆಚ್ಚದಲ್ಲಿ ಮಂಜೂರಾಗಿರುವ ಹೊಸ ಐಸಿಯು ಘಟಕದ ಕಾಮಗಾರಿಯು ಪೂರ್ಣಗೊಂಡಿದ್ದು, ೨೪ ಹಾಸಿಗೆಗಳುಳ್ಳ ಈ ಘಟಕವು ಲೋಕಾರ್ಪಣೆಗೊಳ್ಳಲಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಘಟಕದ ಉದ್ಘಾಟನೆ ನೆರವೇರಲಿದೆ.
ಆಸ್ಪತ್ರೆಯಲ್ಲಿ ಈ ಹಿಂದೆ ೩ ಐಸಿಯು ಬೆಡ್‌ಗಳಿದ್ದು, ಪ್ರಸ್ತುತ ಅದಕ್ಕೆ ಪ್ರತ್ಯೇಕ ಘಟಕವನ್ನು ಮಾಡಿ ಅಗತ್ಯ ಸೌಲಭ್ಯಗಳೊಂದಿಗೆ ಒಟ್ಟು ಬೆಡ್‌ಗಳ ಸಂಖ್ಯೆಯನ್ನು ೨೪ಕ್ಕೆ ಏರಿಸಲಾಗಿದೆ. ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಪುರುಷರ ವಾರ್ಡ್ ನಲ್ಲಿ ಐಸಿಯು ಘಟಕವಿದ್ದು, ಮೂರು ಕೊಠಡಿಗಳನ್ನು ಸಂಪೂರ್ಣ ನವೀಕರಣ ಗೊಳಿಸಿ ಐಸಿಯು ವಾರ್ಡ್ ಆಗಿ ಪರಿವರ್ತಿಸಲಾಗಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ ೨೪ ಐಸಿಯು ಬೆಡ್‌ಗಳಿದ್ದರೂ, ಹಾಲಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬಂದಿಗೆ ಎಲ್ಲಾ ಬೆಡ್‌ಗಳಲ್ಲೂ ಗಂಭೀರ ಸ್ಥಿತಿಯ ರೋಗಿಗಳನ್ನು ದಾಖಲಿಸುವುದು ಕಷ್ಟ ಸಾಧ್ಯ. ಅಂದರೆ ಅಂತಹ ರೋಗಿಗಳಿಗೆ ಪ್ರತಿ ಬೆಡ್‌ಗೆ ಓರ್ವ ನರ್ಸ್, ಮೂರು ಬೆಡ್‌ಗೆ ಒಬ್ಬ ವೈದ್ಯರು ಬೇಕಾಗುತ್ತಾರೆ. ಆದರೆ ಈ ಬೆಡ್‌ಗಳಲ್ಲಿ ಸಾಮಾನ್ಯ ರೋಗಿಗಳನ್ನು ದಾಖಲು ಮಾಡಿ ಚಿಕಿತ್ಸೆ ನೀಡಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರೋಗಿಗಳು ಗಂಭೀರ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಸ್ಪೆಷಲಿಸ್ಟ್ ವೈದ್ಯರ ಜತೆ ಆನ್‌ಲೈನ್‌ನಲ್ಲೇ ಸಲಹೆ ಪಡೆದು ಚಿಕಿತ್ಸೆ ನೀಡುವ ವ್ಯವಸ್ಥೆಗಳುಳ್ಳ ೧೦ ಬೆಡ್‌ಗಳ ಟೆಲಿ ಐಸಿಯು ಘಟಕ ಬಂಟ್ವಾಳಕ್ಕೆ ಮಂಜೂರಾಗಿದೆ. ಈ ಸೌಲಭ್ಯವು ರಾಜ್ಯದ ೪೧ ತಾಲೂಕು ಆಸ್ಪತ್ರೆಗಳಿಗೆ ಮಂಜೂರಾಗಿದ್ದು, ಜಿಲ್ಲೆಯಲ್ಲಿ ಬಂಟ್ವಾಳಕ್ಕೆ ಮಾತ್ರ ಟೆಲಿ ಐಸಿಯು ಲಭಿಸಿದೆ.