ಬಂಟ್ವಾಳ: ಸಾರ್ವಜನಿಕರಿಂದ ಡಿಸಿ ಅಹವಾಲು ಸ್ವೀಕಾರ ಮಿನಿ ವಿಧಾನಸೌಧ ಎದುರು ‘ಪಿಂಕ್ ಶೌಚಾಲಯ’ ನಿರ್ಮಾಣಕ್ಕೆ ಆಕ್ಷೇಪ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಜೂ.21ರಂದು ಮಂಗಳವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇಲ್ಲಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಗೇಟಿನ ಎದುರು ಪುರಸಭೆ ವತಿಯಿಂದ ಅಮೃತ ನಗರ ಯೋಜನೆಯಡಿ ಮಹಿಳೆಯರಿಗಾಗಿ ನಿರ್ಮಿಸುತ್ತಿರುವ ‘ಪಿಂಕ್ ಶೌಚಾಲಯ’ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆಕ್ಷೇಪ ವ್ಯಕ್ತಪಡಿದರು.
ಬಿ.ಸಿ.ರೋಡು ಮಿನಿ ವಿಧಾನಸೌಧಕ್ಕೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸರ್ಕಾರದ ಅನುದಾನ ಸಿಕ್ಕಿದರೆ ಎಲ್ಲಿಯೂ ಶೌಚಾಲಯ ನಿರ್ಮಿಸಬಹುದೇ…? ಯರ‍್ರೀ ನಿಮಗೆ ಸ್ಥಳ ತೋರಿಸಿದ್ದು…? ಎಂದು ಪುರಸಭೆ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಅವರನ್ನು ಪ್ರಶ್ನಿಸಿದರು.
ಬಿ.ಸಿ.ರೋಡು ನ್ಯಾಯಾಲಯ ಎದುರು ಪಾಳು ಬಿದ್ದಿರುವ ಹಳೆ ತಾಲ್ಲೂಕು ಕಚೇರಿ ಮತ್ತು ಹಳೆ ಉಪ ನೋಂದಣಾಧಿಕಾರಿ ಕಚೇರಿ ತೆರವುಗೊಳಿಸಿ ಪಿಂಕ್ ಶೌಚಾಲಯ ನಿರ್ಮಾಣ ಸಹಿತ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ನೀಡಿದ ಸಂತ್ರಸ್ತರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ದೈವಸ್ಥಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯಾಧಿಕಾರಿ ಬೇಕು. ಸರಪಾಡಿಗೆ ಪೂರ್ಣಕಾಲಿಕ ಗ್ರಾಮಕರಣಿಕರು ನಿಯೋಜಿಸಬೇಕು. ತುಂಬೆ ಅಣೆಕಟ್ಟೆಯಿಂದ ಮುಳುಗಡೆ ಭೀತಿ ಎದುರಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಅಕ್ರಮ ಗಣಿಗಾರಿಕೆಗೆ ಸಂಬAಧಿಸಿದAತೆ ಗಣಿ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದ ದೋಣಿ ಮತ್ತು ಮರಳು ನಾಪತ್ತೆಯಾಗಿದೆ ಎಂಬ ದೂರು ಕೇಳಿ ಬಂತು.
ತುಂಬೆಯಲ್ಲಿ ರೂ ೧ಕೋಟಿ ವೆಚ್ಚದ ನೀರಾ ಘಟಕ ಯಂತ್ರೋಪಕರಣ ತುಕ್ಕು ಹಿಡಿಯುತ್ತಿದ್ದು, ಅದನ್ನು ಪುನರ್ ಆರಂಭಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಆಗ್ರಹಿಸಿದರು. ಅಜಿಲಮೊಗರು- ಕಡೇಶಿವಾಲಯ ನಡುವೆ ಸೌಹಾರ್ದ ಸೇತುವೆ ಕಾಮಗಾರಿ ತ್ವರಿತಗೊಳಿಸಬೇಕು ಎಂದು ಸರಪಾಡಿ ಅಶೋಕ ಶೆಟ್ಟಿ ಆಗ್ರಹಿಸಿದರು. ತಾಲ್ಲೂಕು ಕಚೇರಿಯಲ್ಲಿ ಜನಸಾಮಾನ್ಯರಿಗೆ ಮಾಹಿತಿ ಕೇಮದ್ರ ಆರಂಭಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ಒತ್ತಾಯಿಸಿದರು. ಅಲ್ಲಿಪಾದೆಯಲ್ಲಿ ರಸ್ತೆ ಬದಿ ಮರಗಳನ್ನು ಕಡಿದು ಸರ್ಕಾರಿ ಜಮೀನು ಕಬಳಿಸಲು ಹುನ್ನಾರ ನಡೆಯುತ್ತಿದೆ ಎಂದು ವಿಶ್ವನಾಥ ಚಂಡ್ತಿಮಾರ್ ನೇತೃತ್ವದ ರಿಕ್ಷಾ ಚಾಲಕರ ನಿಯೋಗ ದೂರು ಸಲ್ಲಿಸಿದರು. ರೈತ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಮಣಿನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ, ಹೋರಾಟಗಾರ ಲೋಹಿತ್ ಭಂಡಾರಿಬೆಟ್ಟು, ವಕೀಲ ಸುರೇಶ ಕುಮಾರ್ ಮತ್ತಿತರರು ಪಾಲ್ಗೊಂಡರು.
ಇದೇ ವೇಳೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರು ಪ್ರವಾಹ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಬಗ್ಗೆ ಮಾತುಕತೆ ನಡೆಸಿದರು. ಸಹಾಯಕ ಕಮಿಷನರ್ ಮದನ್ ಮೋಹನ್, ತಹಶೀಲ್ದಾರ್ ಡಾ.ಸ್ಮಿತಾ ರಾಮು ಮತ್ತಿತರ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.