ಬಂಟ್ವಾ ಳ: ಸಮಾಜದ ಕೆಳವರ್ಗ ಸಮುದಾಯದಲ್ಲಿ ಜನಿಸಿದ್ದರೂ ಕನಕದಾಸರು ಎಲ್ಲಾ ಜಾತಿ ಧರ್ಮ ಮತ ಮತ್ತು ವರ್ಣಬೇಧ ಹೋಗಲಾಡಿಸಲು ಶ್ರಮಿಸಿ ಸಮಾನತೆ ಮೂಡಿಸಿದ ಶ್ರೇಷ್ಟ ಸಂತನಾಗಿ ಮೂಡಿ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡಿನಲ್ಲಿನ ಶನಿವಾರ ಏರ್ಪಡಿಸಿದ್ದ ‘ಕನಕ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದರಿಂದಾಗಿ ಬಲಾಢ್ಯ ಸಮುದಾಯಗಳ ನಡುವೆಯೂ ರಾಜ್ಯದಲ್ಲಿ ಮೀಸಲಾತಿ ಮೂಲಕ ದಿ.ದೇವರಾಜ ಅರಸು, ದಿ.ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯಿಲಿ, ಸಿದ್ಧರಾಮಯ್ಯ ಮತ್ತಿತರರು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎಂದು ಅವರು ವಿವರಿಸಿದರು.
ತಾ.ಪಂ.ಅಧ್ಯಕ್ಷ ಯಶವಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪನ್ಯಾಸಕ ದಿನೇಶ ಶೆಟ್ಟಿ ಅಳಿಕೆ ಮಾತನಾಡಿ, ಕನಕದಾಸರು ಕೀರ್ತನೆ ಮೂಲಕ ಸಮಾನತೆ ಸಾರುವುದರ ಜೊತೆಗೆ ಸಾಮರಸ್ಯದಲ್ಲಿ ಸಾಕ್ಷಾತ್ಕಾರ ಹಾಗೂ ಜಾತಿಗಿಂತ ನೀತಿ ಮೇಲು ಎಂಬುದನ್ನು ತೋರಿಸಿ ಕೊಟ್ಟಿರುವ ಶ್ರೇಷ್ಟ ಸಂತ ಎಂದರು.
ಪುರಸಭಾಧ್ಯಕ್ಷೆ ವಸಂತಿ, ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ, ಜಿ.ಪಂ.ಸದಸ್ಯರಾದ ಆರ್.ಚೆನ್ನಪ್ಪ ಕೋಟ್ಯಾನ್, ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಮಮತಾ ಎಸ್.ಗಟ್ಟಿ ಮತ್ತಿತರರು ಶುಭ ಹಾರೈಸಿದರು.
ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಸ್ವಾಗತಿಸಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
