ವಗ್ಗ: ಕಾವಳಪಡೂರು ಸರ್ಕಾರಿ ಪ್ರೌಢಶಾಲೆ ಸೈಬರ್ ಅಪರಾಧ ಮತ್ತು ಮಕ್ಕಳ ರಕ್ಷಣೆ ಮಾಹಿತಿ
ಬಂಟ್ವಾಳ: ತಾಲ್ಲೂಕಿನ ವಗ್ಗ ಕಾವಳಪಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಸೈಬರ್ ಅಪರಾಧ ಮತ್ತು ಮಕ್ಕಳ ರಕ್ಷಣೆ, ಅತಿಯಾದ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮ’ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಕಾನೂನಿನ ಬಗ್ಗೆ ಮಾಹಿತಿ ನೀಡಬೇಕು. ಆ ಮೂಲಕ ಉತ್ತಮ ಜೀವನದ ಜೊತೆಗೆ ಸಮಾಜದಲ್ಲಿ ಸೈಬರ್ ಕ್ರೈಂ ಕಡಿವಾಣಕ್ಕೂ ಸಹಕಾರಿಯಾಗಲಿದೆ ಎಂದು ತಾಲ್ಲೂಕು ದೈಹಿಕ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಹೇಳಿದರು.
ಇಲ್ಲಿನ ವಗ್ಗ ಕಾವಳಪಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಸೈಬರ್ ಅಪರಾಧ ಮತ್ತು ಮಕ್ಕಳ ರಕ್ಷಣೆ, ಅತಿಯಾದ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮ’ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಮಂಗಳೂರು ಪಡಿ ಚೈಲ್ಡ್ ಲೈನ್, ಕಾವಳಪಡೂರು ವಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವಿಭಾಗ, ಕಾವಳಪಡೂರು ಗ್ರಾಮ ಪಂಚಾಯಿತಿ, ಕಾವಳಪಡೂರು ಪ್ರಾಥಮಿಕ ಕೃಷಿ ಸಹಕಾರಿ ಸಂಘ, ಬಿ.ಸಿ.ರೋಡು ಎಸ್.ಎಂ.ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಮಹಿಳಾ ಎಸೈ ಭಾರತಿ, ಎಎಸೈ ಗುಣಪಾಲ್, ಚೈಲ್ಡ್ ಲೈನ್ ನಗರ ಸಂಯೋಜಕಿ ಲವಿಟಾ ಡಿಸೋಜ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಕಾವಳಪಡೂರು ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಮಧ್ವ ಕ್ಲಸ್ಟರ್ ಸಿಆರ್‌ಪಿ ಜ್ಯೋತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ, ಮಂಗಳೂರು ಪಡಿ ಜಿಲ್ಲಾ ಸಂಚಾಲಕಿ ಲಲಿತಾ ಶೆಟ್ಟಿ, ಬಂಟ್ವಾಳ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ ಮತ್ತಿತರರು ಇದ್ದರು. ಇದೇ ವೇಳೆ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಮುಖ್ಯಶಿಕ್ಷಕ ಶೇಖ್ ಆದಂ ಸಾಹೇಬ್ ಸ್ವಾಗತಿಸಿ, ಶಿಕ್ಷಣ ಕೇಂದ್ರಗಳ ಒಕ್ಕೂಟ ಉಪಾಧ್ಯಕ್ಷೆ ನಂದಾ ಪಾಯಸ್ ಪ್ರಾಸ್ತಾವಿಕ ಮಾತನಾಡಿದರು. ಆಶಾಲತಾ ಸುವರ್ಣ ವಂದಿಸಿದರು. ಹೆಲೆನ್ ಜ್ಯೂಲಿಯನ್ ಸಿಕ್ವೆರಾ ಕಾರ್ಯಕ್ರಮ ನಿರೂಪಿಸಿದರು.