ವಗ್ಗ: ಹದಗೆಟ್ಟ ರಸ್ತೆ, ಕೈಗೆಟಕುವ ವಿದ್ಯುತ್ ಪರಿವರ್ತಕ ಭೀತಿ, ಕಾಡಬೆಟ್ಟು-ಪಿಲಿಂಗಾಲು ದಂಡೆ ಸಂಪರ್ಕ ರಸ್ತೆ ಕೆಸರುಮಯ ಮೂರು ದಶಕಗಳಿಂದ ಮುಂದುವರಿದ ದುಸ್ಥಿತಿ ಪರಿಶಿಷ್ಟ ಪಂಗಡ ಕಾಲೊನಿ ೨೫ ಮನೆಗಳಿಗೆ ಸಂಕಷ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬಂಟ್ವಾಳ: ತಾಲ್ಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು-ಪಿಲಿಂಗಾಲು -ದಂಡೆ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದೆ. ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವ ಕಾವಳಪಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಸಂಪರ್ಕ ರಸ್ತೆಯೊಂದು ಕಳೆದ ೩೦ ವರ್ಷಗಳಿಂದ ಹದೆಗೆಟ್ಟು ಕೆಸರುಮಯಗೊಂಡ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸುಮಾರು ೨೫ಕ್ಕೂ ಮಿಕ್ಕಿ ಮನೆ ಹೊಂದಿರುವ ಪರಿಶಿಷ್ಟ ಪಂಗಡ ಕಾಲೊನಿ ಸೇರಿದಂತೆ ಪರಶುರಾಮ ಋಷಿ ತಪಸ್ಸು ಮಾಡಿದ ಪುಣ್ಯಭೂಮಿ ಎಂದೇ ಗುರುತಿಸಿಕೊಂಡ ಇಲ್ಲಿನ ಪ್ರಸಿದ್ಧ ‘ಪಿಲಿಂಗಾಲು ಗಾಯತ್ರಿ ದೇವಿ ದೇವಸ್ಥಾನ’ ಸಂಪರ್ಕ ರಸ್ತೆ ದುಸ್ಥಿತಿ ಬಗ್ಗೆ ಯಾವುದೇ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ರಾಜಕಾರಣಿಗಳನ್ನು ಅಣಕಿಸಲಾಗಿದೆ.
ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ-ವಾಮದಪದವು ಮುಖ್ಯ ರಸ್ತೆ ನಡುವೆ ಹಾದು ಹೋಗಿರುವ ಕೇವಲ ಎರಡೂವರೆ ಕಿ.ಮೀ. ಉದ್ದದ ಕಾಡಬೆಟ್ಟು-ಪಿಲಿಂಗಾಲು-ದಂಡೆ ಸಂಪರ್ಕ ರಸ್ತೆ ತೀರಾ ಕಿರಿದಾಗಿದ್ದು, ಕೆಲವೆಡೆ ಮಾತ್ರ ಕಾಂಕ್ರಿಟೀಕರಣಗೊಂಡು ಬಹುತೇಕ ಸಂಪೂರ್ಣ ಕೆಸರುಮಯಗೊಂಡಿದೆ. ಈ ರಸ್ತೆ ಪಂಜಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುನಡುಗೋಡು ಗ್ರಾಮ ಸಂಪರ್ಕಿಸುವ ಹಿನ್ನೆಲೆಯಲ್ಲಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಸೇರ್ಪಡೆಗೊಳಿಸಬೇಕು. ಮಾತ್ರವಲ್ಲದೆ ಪರಿಶಿಷ್ಟ ಪಂಗಡ ಕಾಲೊನಿಗೆ ಪ್ರತ್ಯೇಕ ಅನುದಾನ ಒದಗಿಸಿ ದಾರಿದೀಪ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ನಡುವೆ ರಸ್ತೆ ಬದಿ ಕೈಗೆಟಕುವ ಅಂತರದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದ್ದು, ಪ್ರತಿದಿನ ಸಂಚರಿಸುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಜಾನುವಾರುಗಳಿಗೆ ಆತಂಕ ಎದುರಾಗಿದೆ. ಈ ಹದಗೆಟ್ಟ ರಸ್ತೆಗೆ ಮಳೆಗಾಲದಲ್ಲಿ ಯಾವುದೇ ರಿಕ್ಷಾ ಚಾಲಕರು ಕೂಡಾ ಬರಲು ಒಪ್ಪುತ್ತಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಸ್ಥಳೀಯ ಕೃಷಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಈ ರಸ್ತೆಯ ಎರಡೂ ಬದಿ ಗ್ರಾಮ ಪಂಚಾಯಿತಿ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಕಾಂಕ್ರಿಟೀಕರಣಗೊಳಿಸಲಾಗಿದ್ದು, ಮಧ್ಯದಲ್ಲಿ ಮೂವತ್ತು ಮೀಟರಿನಷ್ಟು ಜಮೀನು ಇಬ್ಬರು ಖಾಸಗಿ ವ್ಯಕ್ತಿಗಳ ಕಾನೂನು ಹೋರಾಟದಲ್ಲಿದೆ. ಇದಕ್ಕೆ ಪರ್ಯಾಯವಾಗಿ ಮೂಡನಡುಗೋಡು ಸಂಪರ್ಕ ರಸ್ತೆ ನಿರ್ಮಾಣ ಮತ್ತು ಕಾಂಕ್ರಿಟೀಕರಣಗೊಳಿಸಲು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಪ್ರತಿಕ್ರಿಯಿಸಿದ್ದಾರೆ.