ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘೧೫೪೦ನೇ ಮದ್ಯವರ್ಜನ ಶಿಬಿರ’ಕ್ಕೆ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗಾ ಚಾಲನೆ ನೀಡಿದರು.
ಸಮಾಜದಲ್ಲಿ ದುಶ್ಚಟಗಳ ದಾಸರಾಗಿ ಯಾರೂ ಉದ್ಧಾರವಾಗಿಲ್ಲ. ಆದರೆ ದುಶ್ಚಟಮುಕ್ತರಾಗಿ ಹಲವಾರು ಮಂದಿ ಹೊಸ ಬದುಕು ರೂಪಿಸಿಕೊಂಡ ಹಲವು ನಿದರ್ಶನಗಳಿವೆ. ಗುಟ್ಕಾ, ಗಾಂಜಾ, ಮದ್ಯ ಸೇವನೆ ಮತ್ತಿತರ ದುಶ್ಚಟಗಳಿಂದ ದೂರವುಳಿದು ದೇಶಕ್ಕೆ ಆಸ್ತಿಯಾಗುವ ಮೂಲಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯ ಈಡೇರಿಸಲು ನಾವೆಲ್ಲರೂ ಕೈ ಜೋಡಿಸಬೇಕು ಎಂದು ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಜೂ.07ರಂದು ಮಂಗಳವಾರ ಏರ್ಪಡಿಸಿದ್ದ ‘೧೫೪೦ನೇ ಮದ್ಯವರ್ಜನ ಶಿಬಿರ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ , ರಾಜ್ಯ ಮದ್ಯಪಾನ ಸಂಯಮ ಮಂಡಳಿ, ತಾಲ್ಲೂಕು ಜನಜಾಗೃತಿ ವೇದಿಕೆ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಬಂಟ್ವಾಳ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಒಂದು ವಾರಗಳತನಕ ನಡೆಯುವ ಈ ಶಿಬಿರಕ್ಕೆ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗಾ ಚಾಲನೆ ನೀಡಿದರು.
ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಜನಜಾಗೃತಿ ವೇದಿಕೆ ಪೂರ್ವಾಧ್ಯಕ್ಷ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಮಾಜಿ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್, ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜಾ ಶುಭ ಹಾರೈಸಿದರು.
ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಪ್ರಮುಖರಾದ ದೇವಪ್ಪ ಕುಲಾಲ್, ಮಹಮ್ಮದ್ ನಂದಾವರ, ಶ್ರೀನಿವಾಸ ಪೂಜಾರಿ, ಜಗದೀಶ ಕೊಯಿ, ಸದಾನಂದ ಶೀತಲ್, ಪ್ರವೀಣ್ ಆಳ್ವ, ಹರೀಶ್ ಕುದನೆ, ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಕಕೀರ್ತಿ ಇಂದ್ರ ಇದ್ದರು.
ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗತಿಸಿ, ಶಿಬಿರ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಪ್ರಾಸ್ತಾವಿಕ ಮಾತನಾಡಿದರು. ಪಾಣೆಮಂಗಳೂರು ಮೇಲ್ವಿಚಾರಕಿ ಅಮಿತಾ ವಂದಿಸಿದರು. ಸಿದ್ಧಕಟ್ಟೆ ಮೇಲ್ವಿಚಾರಕ ಶಿವರಂಜನ್ ಕಾರ್ಯಕ್ರಮ ನಿರೂಪಿಸಿದರು.
