ಬಂಟ್ವಾಳ: ತಾಲ್ಲೂಕಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳಕ್ಕೆ ಕರೆ ಸಿದ್ಧಗೊಳ್ಳುತ್ತಿದೆ. ಕಳೆದ ೧೮ ವರ್ಷಗಳ ಹಿಂದೆ ಬಂಟ್ವಾಳ -ಮೂರ್ಜೆ ರಾಷ್ಟ್ರೀಯ ಹೆದ್ದಾರಿ ನಡುವಿನ ಕಾವಳಕಟ್ಟೆಯಲ್ಲಿ ೧೦ ವರ್ಷ ಅದ್ದೂರಿಯಾಗಿ ನಡೆದು ಬಳಿಕ ಸ್ಥಗಿತಗೊಂಡಿದ್ದ ಹೊನಲು ಬೆಳಕಿನ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳ ಮತ್ತೆ ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಶೀಘ್ರವೇ ಆರಂಭಗೊಂಡು ಅವಿಭಜಿತ ಜಿಲ್ಲೆಯ ಕಂಬಳಗಳ ಪೈಕಿ ‘ಬಂಟ್ವಾಳ ಕಂಬಳ’ವಾಗಿ ಮೂಡಿ ಬರಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಕೂಡಿಬೈಲು ಕಂಬಳ ಕರೆ ಬಳಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಕಂಬಳ ಪ್ರಿಯರಿಗೆ ಈ ಸುದ್ದಿ ಕೇಳಿ ಹೊಸ ಉತ್ಸಾಹ ಮೂಡಿಸಿದೆ ಎಂದರು. ಕಳೆದ ೧೮ ವರ್ಷಗಳ ಬಳಿಕ ಕೂಡಿಬೈಲಿನಲ್ಲಿ ಮತ್ತೆ ಕಂಬಳ ಆರಂಭಿಸಲು ಸಮಯ ಕೂಡಿ ಬಂದಿದೆ. ಈ ಹಿಂದೆ ಕಾವಳಮೂಡೂರು ಮತ್ತು ಕಾವಳಪಡೂರು ಗ್ರಾಮಗಳ ನಡುವೆ ನಡೆಯುತ್ತಿದ್ದ ಕಂಬಳಕ್ಕೆ ‘ಮೂಡೂರು-ಪಡೂರು’ ಕಂಬಳ ಎಂದೇ ಪ್ರಸಿದ್ಧಿಯಾಗಿತ್ತು. ಇದೀಗ ದೇವಸ್ಯಮೂಡೂರು ಮತ್ತು ದೇವಸ್ಯಪಡೂರು ಗ್ರಾಮಗಳ ಮಧ್ಯೆ ನಡೆಯುತ್ತಿರುವ ಕಂಬಳ ಅದೇ ಹೆಸರು ಹೊಂದಾಣಿಕೆಯಾಗಿ ಉಳಿದುಕೊಂಡಿದೆ ಎಂದು ತಿಳಿಸಿದರು.
ಇದೇ ಸಾಲಿನಲ್ಲಿ ಕಂಬಳ ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್ ನೇತೃತ್ವದಲ್ಲಿ ಅತೀ ಕಡಿಮೆ ಅವಧಿಯಲ್ಲಿ ೧೪೫ ಅಡಿ ಉದ್ದದ ಸುಸಜ್ಜಿತ ಜೋಡುಕರೆ ನಿರ್ಮಾಣಗೊಂಡಿದೆ ಎಂದರು. ಇದಕ್ಕೆ ಇಲ್ಲಿನ ಸ್ಥಳೀಯ ಕೃಷಿಕರು ಮತ್ತು ಕಂಬಳಾಸಕ್ತರು ಕೈ ಜೋಡಿಸಿದ್ದಾರೆ. ಈ ಕಂಬಳ ಗದ್ದೆ ಹಿಂದೂ-ಮುಸ್ಲಿಂ ಮತ್ತು ಕ್ರೈಸ್ತರಿಗೆ ಸೇರಿದ್ದು, ಇದೊಂದು ‘ಸೌಹಾರ್ದ ಕಂಬಳ’ವಾಗಿಯೂ ಮೂಡಿ ಬರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಮಾಜಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಕುಲಾಲ್, ಕಂಬಳ ಕೋಣಗಳ ಮಾಲೀಕ ಅವಿಲ್ ಮಿನೇಜಸ್, ಪ್ರಮುಖರಾದ ಮೆಲ್ವಿನ್ ಡಯಾಸ್, ಸುರೇಶ್ ಪೂಜಾರಿ ಜೋರ, ಕೆ.ಮಾಯಿಲಪ್ಪ ಸಾಲ್ಯಾನ್, ಫಾರೂಕ್, ವಿಜಯ್ ಕೋಟ್ಯಾನ್ ಅಲ್ಲಿಪಾದೆ, ವೆಂಕಪ್ಪ ಪೂಜಾರಿ, ಸುವರ್ಣ ಕುಮಾರ್ ಜೈನ್, ಪುಷ್ಪರಾಜ್, ಡೆನ್ಜಿಲ್ ನೊರೊನ್ಹ, ಸುಜಿತ್ ಜೈನ್, ದಿಲೀಪ್ ಫ್ರಾಂಕ್, ರೂಪೇಶ್, ಸಂತೋಷ್, ಪುರುಷೋತ್ತಮ, ಮತ್ತಿತರರು ಇದ್ದರು.
