ಬಂಟ್ವಾಳ : ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಬಳಿ ಬೃಹತ್ ಗಾತ್ರದ ತೀರ್ಥಕೆರೆ ನಿರ್ಮಾಣಗೊಳ್ಳುತ್ತಿದೆ. ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನವು ೧೮ ವರ್ಷಗಳ ಬಳಿಕ ರೂ ೧.೫೦ ಕೋಟಿ ವೆಚ್ಛದಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಭಾರೀ ಸಿದ್ಧತೆ ನಡೆಯುತ್ತಿದೆ.28btl-Badanady

ಕಳೆದ ೧೮ ವರ್ಷಗಳ ಹಿಂದೆ ಕುಸಿದು ಬೀಳುವಂತಿದ್ದ ಮಣ್ಣಿನ ಗೋಡೆಯ ಗಭÀðಗುಡಿ ಮತ್ತು ಮಡಲಿನ ತಟ್ಟಿ ಸಹಿತ ಮಣ್ಣಿನ ಸುತ್ತುಗೋಪುರ ತೆರವುಗೊಳಿಸಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಂಗತ ಕೆ.ಸಂತೋಷ್ ಕುಮಾರ್ ಭಂಡಾರಿ ನೇತೃತ್ವದಲ್ಲಿ ದೇವಳದ ಪುನರ್ ನಿರ್ಮಾಣ ಸಹಿತ ದೇವರ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂದ ಬ್ರಹ್ಮಕಲಶ ನಡೆದಿತ್ತು.

ಇದೀಗ ಸ್ಥಳೀಯ ಉದ್ಯಮಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ ನೇತೃತ್ವದಲ್ಲಿ ಮತ್ತೆ ರೂ ೧.೫೦ ಕೋಟಿ ವೆಚ್ಛದಲ್ಲಿ ದೇಗುಲ ಜೀರ್ಣೋದ್ಧಾರಗೊಳ್ಳುತ್ತಿದೆ. ಈಗಾಗಲೇ ನೂತನ ಬಾವಿ ರಚನೆ, ನಾಗನಕಟ್ಟೆ, ಅಶ್ವತ್ಥಕಟ್ಟೆ, ವಸಂತ ಮಂಟಪ ನಿರ್ಮಾಣ, ಒಳಾಂಗಣದಲ್ಲಿ ಹಾಸುಗಲ್ಲು ಮತ್ತು ಗ್ರಾನೈಟ್ ಅಳವಡಿಕೆ, ಮೇಲ್ಛಾವಣಿಗೆ ಶೀಟು ಅಳವಡಿಕೆ, ಸಭಾಂಗಣ ವಿಸ್ತರಣೆ, ಅನ್ನಛತ್ರ ನಿರ್ಮಾಣಗೊಂಡಿದೆ.

ಇಲ್ಲಿನ ಭಕ್ತರು ಮತ್ತು ಸ್ಥಳೀಯ ಕೃಷಿಕರಿಗೆ ಅನುಕೂಲವಾಗುವಂತೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರು ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರುಗೊಳಿಸಿದ ರೂ ೫೦ಲಕ್ಷ ವೆಚ್ಛದ ತಡೆಗೋಡೆ ರಚನೆ ಸಹಿತ ಬೃಹತ್ ಗಾತ್ರದ ತೀರ್ಥಕೆರೆ ನಿರ್ಮಾಣಗೊಳ್ಳುತ್ತಿದೆ. ಇನ್ನೊಂದೆಡೆ ರೂ ೫೦ಲಕ್ಷ ವೆಚ್ಛದಲ್ಲಿ ರಾಯಿ-ಬದನಡಿ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿಯೂ ಭರದಿಂದ ನಡೆಯುತ್ತಿದೆ.

ವಿಶೇಷತೆ:
ಸುಮಾರು ೫೦೦ ವರ್ಷಗಳ ಹಿನ್ನೆಲೆ ಹೊಂದಿರುವ ಈ ದೇವಳದ ಗರ್ಭಗುಡಿಗೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಬಾಗಿಲು ಇದೆ. ಏಕಶಿಲಾ ವಿಗ್ರಹದಲ್ಲಿ ಎರಡು ದೇವರ ಆರಾಧನೆ ಮತ್ತು ನೈವೇದ್ಯ ಸಮರ್ಪಣೆ ಸಹಿತ ಪೂಜೆ ಸಲ್ಲಿಸುತ್ತಿರುವುದು ಇಲ್ಲಿನ ವಿಶೇಷತೆ. ವಾರ್ಷಿಕ ನಾಗರಪಂಚಮಿ ಮತ್ತು ಷಷ್ಠಿ ಮಹೋತ್ಸವ ನಡೆಯುತ್ತಿದ್ದು, ಸಂತಾನ ಪ್ರಾಪ್ತಿ ಮತ್ತು ಚರ್ಮ ವ್ಯಾಧಿ ನಿವಾರಣೆಗೆ ಭಕ್ತರಿಂದ ಎಡೆಸ್ನಾನ ಮತ್ತು ಬೆಳ್ಳಿ ಹರೆಕೆ ಸಮರ್ಪಣೆಯಾಗುತ್ತಿದೆ ಎಂದು ಪ್ರಧಾನ ಅರ್ಚಕ ಕೆ.ಸುಂದರ ಹೊಳ್ಳ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಂಪತ್ಭರಿತ ‘ಎ ಗ್ರೇಡ್’ ದೇವಸ್ಥಾನಗಳಲ್ಲಿ ಪ್ರತೀ ೧೨ ವರ್ಷಗಳಿಗೊಮ್ಮೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ನೆರವೇರಿಸಲು ಸಾಕಷ್ಟು ಮಂದಿ ರಾಜಕಾರಣಿಗಳು ಉತ್ಸಾಹ ತೋರುತ್ತಿದ್ದಾರೆ. ಆದರೆ ಅರ್ಚಕರಿಗೆ ತಸ್ತೀಕು ಸೌಲಭ್ಯವೂ ಸಿಗದ ಇಂತಹ ಗ್ರಾಮೀಣ ಪ್ರದೇಶದ ಬಡ ದೇವಾಲಯಗಳ ಬಗ್ಗೆ ಮಾತ್ರ ತೀರಾ ಕಡೆಗಣನೆಯಾಗುತ್ತಿದೆ ಎಂಬ ಆರೋಪವೂ ಭಕ್ತರಿಂದ ಕೇಳಿ ಬಂದಿದೆ.

ಏ.೫ರಿಂದ ಬ್ರಹ್ಮಲಶೋತ್ಸವ:
ಏ.೫ರಿಂದ ೧೦ರತನಕ ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಏ.೫ರಂದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಚೌಟ, ಆರ್ಥಿಕ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಕೊಯಿಲ, ಹೊರೆಕಾಣಿಕೆ ಮೆರವಣಿಗೆ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ನೇತೃತ್ವದಲ್ಲಿ ವಿವಿಧ ಉಪ ಸಮಿತಿ ರಚನೆಗೊಂಡಿದೆ. ಇಲ್ಲಿನ ಭಜನಾ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪ್ರತಿದಿನ ಭಜನೆ ಮತ್ತು ಶ್ರಮದಾನ ನಡೆಯುತ್ತಿದೆ ಎಂದು ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *