ಬಂಟ್ವಾಳ: ತಾಲ್ಲೂಕಿನ ತುಂಬೆ ಅಣೆಕಟ್ಟೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ನೇತ್ರಾವತಿ ನದಿಗೆ ಮಂಗಳವಾರ ಗಂಗಾಪೂಜೆ ಸಮರ್ಪಿಸಿದರು. ತುಂಬೆ ಅಣೆಕಟ್ಟೆಯಲ್ಲಿ ಮೂರು ತಿಂಗಳಿಗೆ ಬೇಕಾಗುವಷ್ಟು ನೀರು ಸಂಗ್ರಹಣೆ ಇದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಾಗರಿಕರು ಕುಡಿಯುವ ನೀರು ಮಿತವಾಗಿ ಬಳಸಿ, ಇತರೆ ಬಳಕೆಗೆ ಪರ್ಯಾಯ ಮೂಲ ಅವಲಂಬಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಸಲಹೆ ನೀಡಿದ್ದಾರೆ.![]()
ಇಲ್ಲಿನ ತುಂಬೆ ಅಣೆಕಟ್ಟೆಗೆ ಮಾ.22ರಂದು ಮಂಗಳವಾರ ಭೇಟಿ ನೀಡಿ ನೇತ್ರಾವತಿ ನದಿಗೆ ಗಂಗಾಪೂಜೆ ಸಮರ್ಪಿಸಿದ ಬಳಿಕ ಅವರು ಮಾತನಾಡಿದರು. ಅಮೃತ್ ಯೋಜನೆಯಡಿ ರೂ ೩೫ ಕೋಟಿ ವೆಚ್ಚದಲ್ಲಿ ಒಂದು ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ. ಇದರಲ್ಲಿ ಪಂಪ್ ಉನ್ನತೀಕರಣಗೊಳಿಸಿ ೧೦ ಎಂ.ಎಲ್.ಡಿ ಹೆಚ್ಚುವರಿ ನೀರು ಸಿಗಲಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ, ಇಂಗು ಗುಂಡಿ ಮೂಲಕ ಜಲಸಂಪತ್ತು ಉಳಿದರೆ ಜಲಸಮೃದ್ದಿಯಾಗುತ್ತದೆ ಎಂದರು. ಉಪಮೇಯರ್ ಸುಮಂಗಳ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ , ಶೋಭಾ ರಾಜೇಶ್ , ಸಂದೀಪ್ ಗರೋಡಿ, ಲೀಲಾವತಿ, ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಶಶಿಧರ ಹೆಗ್ಡೆ, ಭಾಸ್ಕರ ಕೆ., ಮನಪಾ ಸದಸ್ಯರಾದ ಗಣೇಶ್ ಕುಲಾಲ್, ಮನೋಹರ್ ಕದ್ರಿ, ಕಿರಣ್ ಕೋಡಿಕಲ್, ಮನೋಜ್, ಕಿಶೋರ್ ಕೊಟ್ಟಾರಿ, ರಂಜಿನಿ ಕೋಟ್ಯಾನ್, ಶಕೀಲಾ ಕಾವ, ರೂಪಶ್ರೀ , ಜಯಶ್ರೀ ಕುಡ್ವ, ವೀಣಾ ಮಂಗಳ , ಜಗದೀಶ್ ಶೆಟ್ಟಿ ಬೊಳಾರ, ತುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಬಿ.ತುಂಬೆ, ಮನಾಪ ಆಯುಕ್ತ ಅಕ್ಷಯ ಶ್ರೀಧರ್ ಎಂಜಿನಿಯರ್ ಚೇತನ್, ಅಶ್ವಿನಿ, ರಾಜೇಶ್ ಸುವರ್ಣ ಇದ್ದರು.
