ಮುಂಬೈ: ನನ್ನ ವೃತ್ತಿ ಜೀವನ ಇಲ್ಲಿಗೇ ಮುಗಿದಿಲ್ಲ. ನಾನು ಮತ್ತೆ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ ಎಂದು ನಟಿ ಶ್ವೇತಾ ಬಸು ಪ್ರಸಾದ್ ಹೇಳಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ಸಿಕ್ಕಿ ಬಿದ್ದು ಎರಡು ತಿಂಗಳ ಕಾಲ ಜೈಲು ವಾಸ ಅನುಭವಿಸಿ ಇದೀಗ ಹೊರಬಂದಿರುವ ಶ್ವೇತಾ, ನಾನು ಮಾಡಬೇಕಾದ ಕೆಲಸಗಳು ತುಂಬಾನೇ ಇವೆ ಎಂದು ಹೇಳಿದ್ದಾರೆ.
ವೇಶ್ಯಾವಾಟಿಕೆಯಲ್ಲಿ ಸಿಕ್ಕಿ ಬಿದ್ದ ಕಾರಣ ಆಕೆಯ ಮುಂದಿರುವ ಎಲ್ಲ ಬಾಗಿಲುಗಳು ಮುಚ್ಚಿಕೊಂಡಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದ ಶ್ವೇತಾ, ಯಾವ ಬಾಗಿಲು ಮುಚ್ಚಿದೆ? ಇದೆಲ್ಲಾ ಸುಳ್ಳು ಆಪಾದನೆಗಳು. ನಾನು ಹೀಗೆಲ್ಲ ಹೇಳಿದ್ದೇನೆ ಎಂದು ಜನರು ಯಾಕೆ ಹೇಳುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ನಾನು ಬಂಧಿತಳಾಗುವ ವೇಳೆ ಪಾತ್ರವೊಂದರ ಆಡಿಷನ್‌ನಲ್ಲಿ ತೊಡಗಿಕೊಂಡಿದ್ದೆ ಎಂದು ಶ್ವೇತಾ ಹೇಳಿದ್ದಾಳೆ.

ಸದ್ಯ ನಾನು ಡಾಕ್ಯುಮೆಂಟರಿಯತ್ತ ನನ್ನ ಗಮನ ಹರಿಸಿದ್ದೇನೆ. ಆದ್ದರಿಂದ ಸಿನಿಮಾದಲ್ಲಿ ಈಗ ತೊಡಗಿಸಿಕೊಳ್ಳುವುದಿಲ್ಲ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ನಿರ್ಮಾಣವಾಗುತ್ತಿರುವ ಡಾಕ್ಯುಮೆಂಟರಿಯಲ್ಲಿ ಈಗಾಗಲೇ ನಾನು ಮೂರೂವರೆ ವರ್ಷ ಕಳೆದಿದ್ದೇನೆ. ನನ್ನ ಮೊದಲ ತಮಿಳು ಚಿತ್ರ ಆದ ನಂತರ ನಾನು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ನಾನು ಡಾಕ್ಯುಮೆಂಟರಿಯತ್ತ ಹೆಚ್ಚಿನ ಗಮನ ನೆಟ್ಟಿದ್ದೇನೆ. ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಗೆಳೆಯರಿದ್ದಾರೆ, ನಾನು ಈಗಲೂ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನೀಗ ನಟನೆಯ ಬಗ್ಗೆಯಷ್ಟೇ ಯೋಚಿಸುತ್ತೇನೆ ಎಂದು ಆಕೆ ಹೇಳಿದ್ದಾಳೆ.
ಬಂಧಮುಕ್ತಳಾದ ನಂತರ ಶ್ವೇತಾ ಕೆಲವು ‘ಗಣ್ಯ’ರ ಹೆಸರನ್ನು ಬಹಿರಂಗಪಡಿತ್ತಾಳೆ ಎಂಬ ಊಹೆ ಎಲ್ಲರಲ್ಲೂ ಇತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವೇತಾ, ವಿಚಾರಣೆ ವೇಳೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿರುವ ಟಾಲಿವುಡ್ ನಟಿಯರ ಹೆಸರು ಹೇಳುವಂತೆ ಒತ್ತಾಯಿಸಿದ್ದರು. ನನಗೆ ಯಾರ ಬಗ್ಗೆಯೂ ಗೊತ್ತಿಲ್ಲ. ನಾನ್ಯಾಕೆ ಇನ್ನೊಬ್ಬ ನಟಿ ಮೇಲೆ ಆಪಾದನೆ ಮಾಡಲಿ?
ನನ್ನ ಅಪ್ಪ ಅಮ್ಮ ತುಂಬ ನೋವು ಅನುಭವಿಸಿದ್ದಾರೆ. ನಾನ್ಯಾವ ತಪ್ಪು ಮಾಡಿದ್ದೇನೆ?. ಮಾಧ್ಯಮದವರು ಯಾಕೆ ನಮ್ಮನೆಯ ಖರ್ಚಿನ ಬಗ್ಗೆ ಲೇವಡಿ ಮಾಡುತ್ತಿದ್ದಾರೆ? ಇನ್ನೊಬ್ಬರ ಕಷ್ಟಗಳನ್ನು ನೋಡಿ ಜನರು ಸಂತೋಷ ಪಡುತ್ತಿದ್ದಾರೆ. ಸ್ಯಾಡಿಸ್ಟ್ ಜನರು! ನನ್ನ ಬಗ್ಗೆ ಮಾಧ್ಯಮಗಳೇ ಕೆಲವೊಂದು ಹೇಳಿಕೆಗಳನ್ನು ಹುಟ್ಟು ಹಾಕಿದೆಯಲ್ಲಾ? ಆ ಮಾಧ್ಯಮಗಳಲ್ಲಿ ನಾನು ಕೇಳುತ್ತಿದ್ದೇನೆ. ನಿಮಗೆ ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ ಎಷ್ಟು ಗೊತ್ತು? ಎಂದು ಶ್ವೇತಾ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.
