ಮುಂಬಯಿ : ಸುಮಾರು ಒಂಬತ್ತು ದಶಕಗಳ ಹಿಂದೆ ಮುಂಬಯಿವಾಸಿ ಅವಿಭಜಿತ ದಕ್ಷಿಣ ಕನ್ನಡ ಮೂಕತಃ ಬ್ರಾಹ್ಮಣರು ಸಂಘಟಿತರಾಗಿ ಸ್ಥಾಪಿತ ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳು ಮುಂಬಯಿ ಮಹಾನಗರಿಯ ಕೇಂದ್ರ ಪ್ರದೇಶ ಸಯಾನ್ ಇಲ್ಲಿ ಪುನರ್ ನಿರ್ಮಿತ ನವನವೀನ ಗೋಕುಲ ಕಟ್ಟಡದ ಉದ್ಘಾಟನಾ ಸಮಾರಂಭವು ಇದೇ ಬರುವ ಎಪ್ರಿಲ್,೦೫ನೇ ಮಂಗಳವಾರ ಮತ್ತು ೦೬ನೇ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವಿಧಿವಿಧಾನಗಳೊಂದಿಗೆ ನೇರವೇರಲಿದೆ.
ಎ.೦೫ನೇ ಮಂಗಳವಾರ ಸಂಜೆ ೬.೦೦ ಗಂಟೆಯಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸಪ್ತ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ ಹಾಗೂ ಎ.೦೬ನೇ ಬುಧವಾರ ಬೆಳಿಗ್ಗೆ ೭.೩೦ ಗಂಟೆಯಿಂದ ಗಣಯಾಗ, ೯.೩೦ ಗಂಟೆಗೆ ದ್ವಾರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨ ಗಂಟೆಯಿಂದ ಉಡುಪಿ ಅದಮಾರು ಮಠದ ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಚಿತ್ತೈಸಿ ಆಶೀರ್ವಚನ ನೀಡಲಿದ್ದಾರೆ ಬಳಿಕ ತೀರ್ಥ ಪ್ರಸಾದ, ಪ್ರಸಾದ ಭೋಜನ ನೆರವೇರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ಎ.೦೫ನೇ ಮಂಗಳವಾರ ಮಧ್ಯಾಹ್ನ ೨.೦೦ ಗಂಟೆಯಿಂದ ವಿದುಷಿ ವೀಣಾ ಶಾಸ್ರ್ರಿ ಮತ್ತು ಶಿಷ್ಯೆಯರಿಂದ ಭಕ್ತಿಗಾನಸುಧೆ, ೩.೦೦ ಗಂಟೆಯಿಂದ ನೂತನ ಸಭಾಗೃಹದಲ್ಲಿ ವಿನೂತನ ಕಾರ್ಯಕ್ರಮವಾಗಿ ಗೋಕುಲದ ಕಿರಿಯ-ಹಿರಿಯ ಯಕ್ಷಗಾನ ಕಲಾವಿದರಿಂದ ತೆಂಕು ಹಾಗೂ ಬಡಗು ತಿಟ್ಟುಗಳ ಯಕ್ಷ ಸಂಗೀತ-ನೃತ್ಯ-ಸಂವಾದ ರಸಭರಿತ ಯಕ್ಷ ಭೋಜನ ಪ್ರಸ್ತುತಗೊಳಿಸಲಿದ್ದಾರೆ.
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಸಾರಥ್ಯ ಹಾಗೂ ಉಭಯ ಸಂಸ್ಥೆಗಳ ಪದಾಧಿಕಾರಿಗಳ ಅವಿರತ ಶ್ರಮದಿಂದ ಪುನಃರ್ ನಿರ್ಮಾಣ ಗೊಂಡು ಸೇವಾರ್ಪಣೆಗೆ ಅಣಿಯಾದ ಗೋಕುಲ (ಶ್ರೀಕೃಷ್ಣ ಮಂದಿರ) ಇದರ ಐತಿಹಾಸಿಕ ಸಮಾರಂಭದಲ್ಲಿ ಮಹಾನಗರದ ಸದ್ಭಕ್ತರು ಸರ್ಕಾರದ ನಿಯಮಗಳನ್ನು ಅನುಸರಿಸಿ ಬಂಧು ಬಾಂಧವರೊಡಗೂಡಿ ಆಗಮಿಸಿ ಸರ್ವ ರೀತಿಯಿಂದ ಸಹಕರಿಸಿ ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಈ ಮೂಲಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
