ಮಂಗಳೂರು: ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಾ ನಿಂತಿದ್ದ 13 ವರ್ಷದ ಬಾಲಕಿ ನಂದಿತಾ ಪೂಜಾರಿಯನ್ನು ಓಮ್ನಿ ಕಾರ್ನಲ್ಲಿ ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾದ ಆರೋಪಿಯ ಹೆಸರನ್ನು ಪೊಲೀಸರು ಯಾಕಾಗಿ ಬಿಟ್ಟು ಕೊಡುತ್ತಿಲ್ಲ ಎಂಬ ಸಂಶಯ ಸಹಜವಾಗಿಯೇ ರಾಜ್ಯದ ಜನತೆಯನ್ನು ಕಾಡಲು ಶುರುವಾಗಿದೆ.
ಬಾಲಕಿ ನಂದಿತಾ ಕೊಲೆಗೀಡಾಗಿ ಈಗಾಲೇ ನಾಲಕು ದಿನಗಳು ಕಳೆದಿದ್ದು ತೀರ್ಥಹಳ್ಳಿ ಎಎಸ್ಪಿ ಕೌಶಲೇಂದ್ರ ಅವರು ಈಗಗಾಲೇ ಒಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು.



ನಂದಿತಾ ಪೂಜಾರಿ ಕೊಲೆರಹಸ್ಯ ನಿಗೂಢವಾಗಿಯೇ ಉಳಿದಿದ್ದು, ಮರಣೋತ್ತರ ವರದಿಯನ್ನೂ ಕೂಡ ಪೊಲೀಸರು ಬಿಟ್ಟುಕೊಡುತ್ತಿಲ್ಲ. ಬಾಲಕಿಯನ್ನು ಗ್ಯಾಂಗ್ರೇಪ್ಗೆ ಒಳಪಡಿಸಲಾಗಿದ್ದು, ಬಳಿಕ ಬಾಲಕಿಗೆ ನೀರಿನಲ್ಲಿ ವಿಷಹಾಕಿ ಕುಡಿಯಲು ಹೇಳಿ ಬಳಿಕ ಆಕೆಯನ್ನು ಎತ್ತರದ ದಿಬ್ಬದಿಂದ ದೂಡಿ ಹಾಕಲಾಗಿದೆ ಎಂಬುವುದನ್ನು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. ಆದರೆ ನಂತರ ನಡೆದ ಬೆಳವಣಿಗೆಯನ್ನು ಪೊಲೀಸರಂಥಾ ಪೊಲೀಸರೇ ಬಿಟ್ಟುಕೊಡುತ್ತಿಲ್ಲ. ಇದನ್ನೆಲ್ಲಾ ಗಮನಿಸಿದಾಗ ಈ ಪ್ರಕರಣದ ಹಿಂದೆ ಬಾರೀ ದೊಡ್ಡ ಕುಳದ ಕೈವಾಡವಿರಬಹುದೇ ಎಂಬ ಸಂಶಯ ನಾಗರಿಕರನ್ನು ಕಾಡುತ್ತಿದ್ದು ಸಹಜವಾಗಿಯೇ ಕೆರಳಿಸುತ್ತಿದೆ.
ಬೆಳ್ತಂಗಡಿಯ ಉಜಿರೆಯಲ್ಲಿ ಅತ್ಯಾಚಾರಗೊಂಡು ಕೊಲೆಯಾಗಿ ಹೋದ ಸೌಜನ್ಯಾ ಪ್ರಕರಣದ ದೃಷ್ಟಿಕೋನದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಈ ಪ್ರಕರಣವನ್ನು ನೋಡುತ್ತಿದ್ದು ಫೇಸ್ಬುಕ್ ವಾಟ್ಸ್ಅಪ್ಗಳಲ್ಲಿ `ಜಸ್ಟೀಸ್ ಫಾರ್ ಸೌಜನ್ಯಾ’ ಎಂಬ ಅಭಿಯಾನವನ್ನು ಶುರುಹತ್ತಿದ್ದಾರೆ. ಈ ಅಭಿಯಾನಕ್ಕೆ ಈಗಾಗಲೇ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ಸೂಚಿಸುತ್ತಿದ್ದು ರಾಜ್ಯಾದ್ಯಂತ ಪಸರಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ. ಎಬಿವಿಪಿ ಸಂಘಟನೆ ಈ ಪ್ರಕರಣದ ತನಿಖೆಯ ಕುರಿತಾಗಿ ರಾಜ್ಯಾದ್ಯಂತ್ ಪ್ರತಿಭಟನೆ ನಡೆಸಲು ಮುಂದಾಗಿದೆ.
ಒಟ್ಟಿನಲ್ಲಿ ಈ ಪ್ರಕರಣ ಎತ್ತ ಸಾಗುತ್ತಿದೆ, ಏನಾಗುತ್ತಿದೆ, ಸೆರೆಯಾದ ಆರೋಪಿ ಯಾರು, ಓಮ್ನಿಯಲ್ಲಿ ನಂದಿತಾಳನ್ನು ಕರೆದುಕೊಂಡು ಹೋದ ದುರುಳರು ಯಾರು, ಪೊಲೀಸರೇಕೆ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ ಎಂದೆಲ್ಲಾ ಸಂಶಯಕ್ಕೆ ಕಾರಣವಾಗುತ್ತಿದೆ.
ಈ ಪ್ರಕರಣದಿಂದ ಈಗಾಗಲೇ ಜನರು ಕೆರಳಿ ಕೆಂಡವಾಗಿದ್ದಾರೆ. ಶನಿವಾರ ತೀರ್ಥಹಳ್ಳಿ ಬಂದ್ಗೆ ಕರೆ ನೀಡಲಾಗಿತ್ತು. ಈ ವೇಳೆ ಜನರು ಉದ್ರಿಕ್ತಗೊಂಡಿದ್ದರು. ಅವರ ಉದ್ರೇಕ ಇನ್ನೂ ಶಮನಗೊಂಡಿಲ್ಲ. ಕೊಲೆರಹಸ್ಯವನ್ನು ಇನ್ನೂ ಗೌಪ್ಯವಾಗಿಡುವುದರಿಂದ ಜನರನ್ನು ವಂಚಿಸಿದಂತೆ ಅಲ್ಲದೆ ಅವರನ್ನು ಪರೋಕ್ಷವಾಗಿ ಕೆರಳಿಸಿದಂತೆ. ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಆರೋಪಿಯನ್ನು ಬಂಧಿಸಿ ಮೃತ ನಂದಿತಾಳಿಗೆ ನ್ಯಾಯ ಒದಗಿಸಬೇಕೆಂಬುದು ಜನರ ಆಗ್ರಹವಾಗಿದೆ.
ತೀರ್ಥಹಳ್ಳಿ, ಕೊಪ್ಪ ಬಂದ್:
ಬಾಲಕಿ ನಂದಿತಾ ಪೂಜಾರಿ ಅಪಹರಣ ಮತ್ತು ಕೊಲೆ ಪ್ರಕರಣದ ಸಂಬಂಧ ಹೋರಾಟಗಳು ತೀವ್ರಗೊಳ್ಳುತ್ತಿದೆ. ನಿನ್ನೆ ರಾತ್ರಿ ಎಬಿವಿಪಿ ವತಿಯಿಂದ ತಪ್ಪಿತಸ್ಥರ ಶೀಘ್ರ ಬಂಧನಕ್ಕೆ ಆಗ್ರಹಿಸಿ ಕ್ಯಾಂಡಲ್ ಮಾಚರ್್ ನಡೆಯಿತು. ಅಲ್ಲದೇ, ತೀರ್ಥಹಳ್ಳಿಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ನಗರದ ಸುತ್ತಮುತ್ತ ಪೊಲೀಸರಿಂದ ನಾಕಾಬಂದಿ ಹಾಕಲಾಗಿದೆ. ಇದರ ನಡುವೆಯೂ ತೀರ್ಥಹಳ್ಳಿ ಪಟ್ಟಣದಲ್ಲಿ ಇಂದು ಬಂದ್ಗೆ ಹಲವು ಸಂಘ-ಸಂಸ್ಥೆಗಳು ಕರೆ ನೀಡಿವೆ. ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ

