ಮುಂಬಯಿ: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಇಂದಿಲ್ಲಿ ಸೋಮವಾರ ಸಂಜೆ ಮುಂಬಯಿ ಅಲ್ಲಿನ ರಾಜಭವನಕ್ಕೆ ಭೇಟಿಗೈದು ರಾಜ್ಯಪಾಲರ ಅಧಿಕೃತ ಕಾರ್ಯಾಲಯದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಉಭಯ ಸಂಸ್ಥೆಗಳ ಅಧೀನದಲ್ಲಿ ಸಯಾನ್‌ನಲ್ಲಿ ಪುನಃರ್ ನಿರ್ಮಾಣ ಗೊಂಡಿರುವ ಶ್ರೀಕೃಷ್ಣ ಮಂದಿರ ಹಾಗೂ ಗೋಕುಲ ಬಗ್ಗೆ ಮಾಹಿತಿಯನ್ನಿತ್ತರು.
ಕೃಷ್ಣಾವತಾರವಾಗಿ ರೂಪತಾಳಿ ತಮ್ಮೆಲ್ಲರ ಅವಿರತ ಶ್ರಮದಿಂದ ಶ್ರದ್ಧಾಕೇಂದ್ರವಾಗಿ ಕಟ್ಟಲ್ಪಟ್ಟ ಶ್ರೀಕೃಷ್ಣ ಮಂದಿರ ಗೋಕುಲ ಭೌಗೋಳಿಕವಾಗಿ ಕಂಗೋಳಿಸಲಿ. ಶೀಘ್ರವಾಗಿ ನಡೆಸಲ್ಪಡುವ ಗೋಕುಲ ನೂತನ ಕಟ್ಟಡದ ಪುನಃರ್ ಪ್ರತಿಷ್ಠೆ, ಧಾರ್ಮಿಕ ಉತ್ಸವದ ಒಂದು ಕಾರ್ಯಕ್ರಮದಲ್ಲಿ ಖುದ್ಧಾಗಿ ತೊಡಗಿಸಿ ಕೊಳ್ಳುವಂತೆ ಯತ್ನಿಸುವೆ. ಇಷ್ಟೊಂದು ಕೋಟ್ಯಾಂತರ ಮೊತ್ತದಲ್ಲಿ ನಿರ್ಮಿತ ಈ ಗೋಕುಲದ ವೈಶಿಷ್ಟ್ಯತೆಯನ್ನು ಕಣ್ಣಾರೆ ಕಂಡುಕೊಳ್ಳುವ ಪ್ರಯತ್ನ ಮಾಡುವೆ. ಶ್ರೀಕೃಷ್ಣನ ಅನುಗ್ರಹದಂತೆ ತಮ್ಮೆಲ್ಲರ ಆಶಯವು ನಿರ್ವಿಘ್ನವಾಗಿ ನೆರವೇರಲಿ. ನಿಮ್ಮೆಲ್ಲರ ಹಾರ್ಟ್ ವರ್ಕ್ ಮತ್ತು ಹಾರ್ಡ್ ವರ್ಕ್ನಿಂದ ರೂಪಿತಗೊಂಡ ಮಂದಿರಕ್ಕೆ ನಾನು ಓರ್ವ ಸಾಮಾನ್ಯ ಭಕ್ತನಾಗಿ ಆಗಮಿಸಿ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗುವೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಶುಭ ಕೋರಿದರು.

ಕರ್ನಾಟಕ ಕರಾವಳಿಯ ತುಳುನಾಡುನಿಂದ ಮುಂಬಯಿಗೆ ಆಗಮಿಸಿ ನೆಲೆಯಾದ ಹಿರಿಯರಿಂದ ಸ್ಥಾಪಿತವಾದ ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘ-ಬಾಂಬೆ ಸೌತ್ ಕೆನರಾ ಬ್ರಾಹ್ಮಿನ್ಸ್ ಅಸೋಸಿಯೇಷನ್ (ಬಿಎಸ್‌ಕೆಬಿಎ) ಮತ್ತು ಯಶಸ್ವೀ ಒಂಬತ್ತುವರೆ ದಶಕಗಳನ್ನು (೯೬ ವರ್ಷಗಳು) ಪೂರೈಸಿದ ಬಿಎಸ್‌ಕೆಬಿಎ ಯಶೋಗಾಥೆಯ ಹಿಂದಿನ ಹಾದಿ, ಸುಮಾರು ೬೫ ವರ್ಷಗಳಷ್ಟು ಪುರಾತನವಾದ ಸಾಯನ್ ಅಲ್ಲಿನ ಗೋಕುಲದ ಕಟ್ಟಡ ಜೀರ್ಣಾವಸ್ಥೆ ಮತ್ತು ಗೋಕುಲ ಕಟ್ಟಡದ ನವೀಕರಣ ಹಾಗೂ ಶ್ರೀ ಕೃಷ್ಣ ಮಂದಿರದ ಪುನಃರ್ ಪ್ರತಿಷ್ಠೆ ಬಗ್ಗೆ ರಾಜ್ಯಪಾಲರಿಗೆ ಮನವರಿಸಿದರು. ಅಂತೆಯೇ ಸಂಘದ ಮುಖಪತ್ರಿಕೆ ಗೋಕುಲವಾಣಿ, ‘ಗೋಕುಲದ ಯೋಜನೆಗಳು: ಗುರಿ ೨೦೨೦’, ಹಿರಿಯ ನಾಗರಿಕರ ಆಶ್ರಯಧಾಮ, ೧೨ ವರ್ಷಗಳ ಹಿಂದೆ ನವಿಮುಂಬಯಿಯ ನೇರೂಲ್‌ನಲ್ಲಿ ಸ್ಥಾಪಿಸಿದ ‘ಹಿರಿಯ ನಾಗರಿಕರ ಆಶ್ರಯಧಾಮ ‘ಆಶ್ರಯ’ ಇತ್ಯಾದಿಗಳ ಬಗ್ಗೆ ಸ್ಥೂಲವಾಗಿ ರಾಜ್ಯಪಾಲರಿಗೆ ಡಾ| ಸುರೇಶ್ ರಾವ್ ತಿಳಿಸಿದರು.

ಗೋಕುಲ ಶ್ರೀಕೃಷ್ಣ ಮಂದಿರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೃಷ್ಣಾವತಾರವಾಗಿ ರೂಪತಾಳಿದ ಶ್ರೀಕೃಷ್ಣ ಮಂದಿರ ಪುನಃರ್ ಪ್ರತಿಷ್ಠಾಪಿಸಲು, ಧಾರ್ಮಿಕ ಸೇವೆಗೆ ಸಿದ್ಧಗೊಂಡಿದೆ. ಆದರೆ ಇದೇ ಫೆಬ್ರವರಿಯಲ್ಲಿ ವಿಜೃಂಭನೆಯಿಂದ ನಡೆಸಲುದ್ದೇಶಿಸಿದ ಶ್ರೀ ಕೃಷ್ಣ ಮಂದಿರ, ಗೋಕುಲ ನೂತನ ಕಟ್ಟಡದ ಪುನಃರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಧಾರ್ಮಿಕ ಉತ್ಸವವನ್ನು ಓಮಿಕ್ರಾನ್ ಮುನ್ನೆಚ್ಚರಿಕಾ ಕ್ರಮವಾಗಿಸಿ ಮತ್ತೆ ಮುಂದೂಡಿ ಬರುವ ಮೇ ತಿಂಗಳಲ್ಲಿ ಜರುಗಿಸಲು ನಿರ್ಧಾರಿಸಲಾಗಿದೆ ಎಂದೂ ಡಾ| ಸುರೇಶ್ ರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ ಹೊಳ್ಳ, ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಶೆಟ್ಟಿ ನಾಯ್ಕ್ ಎಂಡ್ ಅಸೋಸಿಯೇಟ್ಸ್ ನ ಮುಖ್ಯಸ್ಥ ಸಿಎ| ಜಗದೀಶ್ ಬಿ.ಶೆಟ್ಟಿ (ಸುರತ್ಕಲ್), ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದರು.

