ಕೈಕಂಬ : ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲು ವಾರ್ಡ್ ಸಂಖ್ಯೆ ೨೦ ವ್ಯಾಪ್ತಿಯ ವಾಮಂಜೂರು ಜಂಕ್ಷನ್ ರಸ್ತೆಯಿಂದ ಪಿಲಿಕುಲ ನಿಸರ್ಗಧಾಮದ ಮಹಾದ್ವಾರದವರೆಗೆ ಪಾಲಿಕೆಯ ೧೫ನೇ ಹಣಕಾಸು ಯೋಜನೆಯಡಿ ಸುಮಾರು ೨೨ ಲಕ್ಷ ರೂ ವೆಚ್ಚದಲ್ಲಿ ಅಳವಡಿಸಲಾದ ಎಲ್‌ಇಡಿ ಸಾಲು ದೀಪವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ-೩೧೭ಡಿ ಪ್ರಾಂತೀಯ ಸಮ್ಮೇಳನ-ವಲಯ-೩ ಇದರ ವತಿಯಿಂದ ವಾಮಂಜೂರಿನ ಪಿಲಿಕುಳ ರಸ್ತೆಯ ಆದಿಭಾಗದಲ್ಲಿ ೨.೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ‘ವರ್ತುಲ ಉದ್ಯಾನ’ ಉದ್ಘಾಟಿಸಲಾಯಿತು.
ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಇದೊಂದು ಸಮಾಜಮುಖಿ ಕಾರ್ಯಕ್ರಮವಾಗಿದ್ದು, ಸರ್ಕಾರ ಹಾಗೂ ಪಾಲಿಕೆಯು ನಗರಗಳ ಪ್ರಮುಖ ಕಡೆಗಳಲ್ಲಿ ಇಂತಹ ಯೋಜನೆ ಹಮ್ಮಿಕೊಂಡಿದೆ. ಎಲ್‌ಇಡಿ ದೀಪಗಳ ಅಳವಡಿಕೆಯಿಂದ ಪ್ರವಾಸಿಗರ ಆಕರ್ಷಣೆ ಹೆಚ್ಚಲಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪಿಲಿಕುಳ ನಿಸರ್ಗಧಾಮ ಸಂಪರ್ಕಿಸುವ ಈ ರಸ್ತೆಯಲ್ಲಿ ಇನ್ನೂ ಕೆಲವು ಪ್ರವಾಸಿ ಆಕರ್ಷನೆಯ ಯೋಜನೆಗಳು ಕಾರ್ಯಗತವಾಗಬೇಕಿದೆ. ಎಲ್‌ಇಡಿ ದೀಪಗಳ ಅಳವಡಿಕೆಯಿಂದ ವಿದ್ಯುತ್ ಮಿತ ಬಳಕೆಯಾಗಲಿದೆ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ದೇಶ-ವಿದೇಶಿ ಪ್ರವಾಸಿಗರು ಸೇರುವ ಇಲ್ಲಿ ರಸ್ತೆಗಳ ದೀಪಗಳು ಆಕರ್ಷಣೀಯವಾಗಿರಬೇಕು. ಎಲ್‌ಇಡಿ ದೀಪಗಳ ಅಳವಡಿಕೆ ಮತ್ತು ಕಿರು ಉದ್ಯಾನದಿಂದ ಇಲ್ಲಿನ ಆಕರ್ಷಣೆ ಹಚ್ಚಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ರಾಜೇಶ್ ಕೊಟ್ಟಾರಿ, ಲ. ವಸಂತ ಕುಮಾರ್ ಶೆಟ್ಟಿ, ಲ. ಸ್ವರೂಪಾ ಎಸ್ ಶೆಟ್ಟಿ, ಶಶಿಧರ ಮಾರ್ಲ, ಮೂಡುಶೆಡ್ಡೆ ಪಂಚಾಯತ್ ಅಧ್ಯಕ್ಷೆ ಜಯಶ್ರೀ, ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ರಾಜೀವ ಶೆಟ್ಟಿ ಸಲ್ಲಾಜೆ, ಲಕ್ಷ್ಮಣ್ ಶೆಟ್ಟಿಗಾರ, ಅನಿಲ್ ಕುಮಾರ್ ರೈ, ರಘು ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಮೋಹನದಾಸ್ ಶೆಟ್ಟಿ ನಿರೂಪಿಸಿದರೆ, ಎನ್ ಟಿ ರಾಜ ವಂದಿಸಿದರು.

