ಮುಂಬಯಿ : ಮಹಾರಾಷ್ಟ್ರ ದಾದ್ಯಂತದ ಹೊಟೇಲು ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳುವೆ ಎಂದು ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರ ದ ಮಾಜಿ ಮುಖ್ಯಮಂತ್ರಿ, ರಾಷ್ಟçವಾದಿ ಕಾಂಗ್ರೇಸ್ ಪಕ್ಷ (ಎನ್‌ಸಿಪಿ)ದ ಸರ್ವೋಚ್ಛ ನಾಯಕ, ಶರದ್ ಪವಾರ್ ತಿಳಿಸಿದರು.
ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ನೇತೃತ್ವದ ನಿಯೋಗವು ಶರದ್ ಪವಾರ್ ಅವರನ್ನು ಮಹಾಲಕ್ಷ್ಮೀ ಅಲ್ಲಿನ ಸಿಲ್ವರ್ ಓಕ್ ನಿವಾಸದಲ್ಲಿ ಭೇಟಿ ನೀಡಿ ಮಹಾರಾಷ್ಟ್ರ ದಾದ್ಯಂತದ ಹೊಟೇಲು ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಸಿದ್ದು ಈ ಬಗ್ಗೆ ತ್ವರಿತವಾಗಿ ಕ್ರಮಕೈಗೊಳ್ಳುವ ಬಗ್ಗೆ ಪವಾರ್ ಭರವಸೆಯನ್ನಿತ್ತರು.
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರದಲ್ಲಿನ ಹೋಟೆಲ್ ಉದ್ಯಮದ ವ್ಯವಹಾರವು ಸಂಪೂರ್ಣ ಹದಗೆಟ್ಟಿದೆ ಮತ್ತು ಸಂಕಷ್ಟದ ಸ್ಥಿತಿಯಲ್ಲಿದೆ ಎಂಬುದನ್ನು ಮನವರಿಸುವ ನಿಟ್ಟಿನಲ್ಲಿ ಈ ಭೇಟಿ ಮಾಡಿದ್ದು ಮಹಾರಾಷ್ಟ್ರದಾದ್ಯಂತದ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ತಾವು ಪರಿಹರಿಸುವರೇ ವಿರಾರ್ ಶಂಕರ್ ಶೆಟ್ಟಿ ಕೋರಿದರು. ಹಾಗೂ ಕೋವಿಡ್ ಲಸಿಕೆಯ ಎರಡನೇ ಔಷಧಿ ಪ್ರಮಾಣ (೨-ಡೋಸ್) ಪಡೆಯದೇ ಹೊಟೇಲ್‌ಗೆ ಆಗಮಿಸುವ ಜುಲ್ಮಾನೆ (ದಂಡ)ಯನ್ನು ಹೊಟೇಲು ಮಾಲೀಕರು, ನಿರ್ವಹಕರು ಭರಿಸುವ ದ್ವಂದ್ವನೀತಿ ಬಗ್ಗೆ, ಹೊಟೇಲು ವ್ಯಾಪಾರದ ರಾತ್ರಿ ೧.೩೦ ಗಂಟೆ ತನಕದ ಸಮಯಾವಧಿ ಕಡಿತ ಗೊಳಿಸಿದ ಬಗ್ಗೆ ಹಾಗೂ ವ್ಯಾಪಾರಕ್ಕೆ ಬರೇ ೫೦% ಗ್ರಾಹಕ ಸೇವೆಗೆ ಅನುಮತಿ ನೀಡಿದರೂ ಸೇವಾಶುಲ್ಕ ಮಾತ್ರ ೧೦೦% ಸಂಪೂರ್ಣವಾಗಿ ಭರಿಸುವ ಬಗ್ಗೆ ನಿಯೋಗವು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವರೇ ಮನವಿ ಮಾಡಿದರು.
ಮಹಾರಾಷ್ಟ್ರ ಸರ್ಕಾರವು ಮಧ್ಯರಾತ್ರಿ ೧:೩೦ ಗಂಟೆ ತನಕ ವ್ಯವಹಾರ ನಡೆಸಲು ಸರ್ಕಾರಿ ಸುಗ್ರೀವಾಜ್ಞೆ ಹೊರಡಿಸಿದರೂ ಹೆಚ್ಚಿನ ಮುನ್ಸಿಪಲ್ ಕೌನ್ಸಿಲ್ ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ವ್ಯಾಪಾರ ನಡೆಸಲು ಸಮಯದ ನಿರ್ಬಂಧ ಹೇರಿ ಅಧಿಕಾರಿಗಳು ತಡರಾತ್ರಿ ೧೨:೦೦ ಗಂಟೆ ವರೆಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ. ಸರ್ಕಾರಿ ಸುಗ್ರೀವಾಜ್ಞೆಯಂತೆ ರಾತ್ರಿ ೧:೩೦ ರವರೆಗೆ ವ್ಯಾಪಾರವನ್ನು ಅನುಮತಿಸಲು ಬೆಂಬಲ ನೀಡಬೇಕು.
ಯಾವುದೇ ಗ್ರಾಹಕರು ಇನ್ನೂ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳದಿದ್ದರೆ ಮಾಲೀಕರಿಂದ ರೂಪಾಯಿ ೧೦,೦೦೦/- ದಂಡವನ್ನು ಸಂಗ್ರಹಿಸುವ ಕ್ರಮ ಸಮಂಜಸವಲ್ಲ. ಇದು ರೆಸ್ಟೋರೆಂಟ್ ಮಾಲೀಕರಿಗೆ ಮುಜುಗರ ಉಂಟು ಮಾಡುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಗ್ರಾಹಕರ ತಪ್ಪಿಗಾಗಿ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಸರ್ಕಾರದ ಕ್ರಮ ರದ್ದುಗೊಳಿಸುವರೇ ಮತ್ತು ವ್ಯಾಪಾರವನ್ನು ನಡೆಸಲು ನಿರ್ಬಂಧಗಳು ಮತ್ತು ರೆಸ್ಟೋರೆಂಟ್‌ನ ೫೦% ಸಾಮರ್ಥ್ಯದಲ್ಲಿ ವ್ಯವಹಾರವನ್ನು ನಡೆಸುವ ನಿರ್ಬಂಧದ ಕಾರಣ ಇಡೀ ವರ್ಷಕ್ಕೆ ೧೦೦% ಎಫ್‌ಎಲ್-೩ ಅಬಕಾರಿ ಪರವಾನಗಿ ಶುಲ್ಕವನ್ನು ಮುಂಚಿತವಾಗಿ ಪಾವತಿಸಲು ಅಸಾಧ್ಯವಾಗಿದೆ. ಆದ್ದರಿಂದ ನಾವು ೨೦೨೨-೨೦೨೩ ವರ್ಷಕ್ಕೆ ೫೦% ಅಬಕಾರಿ ಪರವಾನಗಿ ಶುಲ್ಕವನ್ನು ಪಾವತಿಸಲು ನಮಗೆ ಸಹಾಯ ಮಾಡಲು ನಿಯೋಗವು ಮನವಿ ಸಲ್ಲಿಸಿತು.
ನಿಯೋಗದಲ್ಲಿ ಫೆಡರೇಶನ್‌ನ ಉಪಾಧ್ಯಕ್ಷ ಭರತ್ ಶೆಟ್ಟಿ ಘಾಟ್ಕೋಪರ್, ಗೌರವ ಪ್ರಧಾನ ಕಾರ್ಯದರ್ಶಿ ಶ್ಯಾಮ ಎನ್.ಶೆಟ್ಟಿ, ಗೌರವ ಕೋಶಾಧಿಕಾರಿ ದುರ್ಗಾಪ್ರಸಾದ್ ಸಿ.ಸಾಲಿಯಾನ್, ಜೊತೆ ಕೋಶಾಧಿಕಾರಿ ಬಾಬು ಎಸ್.ಶೆಟ್ಟಿ ಮಲಾಡ್, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಕಳತ್ತೂರು ವಿಶ್ವನಾಥ ಶೆಟ್ಟಿ ಹಾಗೂ ಉದ್ಯಮಿ ನಿರಂಜನ್ ಶೆಟ್ಟಿ ಉಪಸ್ಥಿತರಿದ್ದರು.
