ಮೂಡುಬಿದಿರೆ: ಸ್ವಚ್ಛ ಮೂಡುಬಿದಿರೆ ಪರಿಕಲ್ಪನೆಯೊಂದಿಗೆ ಸಾರ್ವಜನಿಕರು, ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಮುಖಾಂತರ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮೂಡುಬಿದಿರೆ ಪುರಸಭೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾಡಿದೆ.
ಸ್ವಾತಂತ್ರೋತ್ಸವದ ಅಮೃತಮಹೋತ್ಸವದ ಅಂಗವಾಗಿ ಸ್ವಚ್ಛ ಭಾರತ್ ಯೋಜನೆಯಡಿ ನಡೆಯುತ್ತಿರುವ ಸ್ವಚ್ಛ ಸರ್ವೇಕ್ಷಣ 2022 ಸ್ವಚ್ಛತೆ ಜಾಗೃತಿಯ ಕುರಿತ ಸ್ಪರ್ಧೆಯನ್ನು ಮೂಡುಬಿದಿರೆಯಲ್ಲಿ ಆಯೋಜಿಸಲಾಗಿದ್ದು, ಅದರಲ್ಲಿ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಭಿತ್ತಿಚಿತ್ರಗಳನ್ನು ರಚಿಸುವ ಸ್ಪರ್ಧೆ ಪೇಟೆಯ ವಿವಿಧ ಭಾಗಗಳಲ್ಲಿ ನಡೆಯಿತು.
ಆಸಕ್ತ ನಾಗರಿಕರು, ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆ, ಆಳ್ವಾಸ್ ಕಾಲೇಜು, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಸಹಿತ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಸ್ವಚ್ಛತೆಯ ಜಾಗೃತಿ ಮೂಡಿಸಲು ತಮ್ಮದೇ ಶೈಲಿಯಲ್ಲಿ ಚಿತ್ರಗಳನ್ನು ಬಿಡಿಸಿದರು.
ಪೇಟೆಯ ಸತ್ಯನಾರಾಯಣ ದೇವಳದ ಸಮೀಪ, ಜ್ಯೋತಿನಗರ ಆಯ್ಯಪ್ಪ ಮಂದಿರ, ಪೇಟೆಯ ಹನುಮಂತ ದೇವಸ್ಥಾನ, ರಿಂಗ್ರೋಡ್ ಬಳಿಯಿರುವ.ಈಜುಕೊಳ ಬಳಿ, ಸಮುದಾಯ ಆರೋಗ್ಯ ಕೇಂದ್ರದ ಆವರಣ ಗೋಡೆ, ಜೈನಪೇಟೆಯಲ್ಲಿರುವ ಶೌಚಾಲಯ, ಸ್ವರಾಜ್ಯ ಮೈದಾನದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಗೋಡೆಗಳ ಮೇಲೆ ಸ್ವಚ್ಛತೆಯ ಅರಿವು ಮೂಡಿಸುವ ಆಕರ್ಷಕ ಚಿತ್ರಗಳನ್ನು ಬಿಡಿಸಿದರು.
